ಕಾರವಾರ: ಬಯಲು ಶೌಚಮುಕ್ತ ಗ್ರಾಮ ಕುರಿತು ಕಾರ್ಯಾಗಾರ

ಕಾರವಾರ, ಜೂ.28: ಜಿಲ್ಲೆಯ ಗ್ರಾಮಗಳನ್ನು ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಯಿತು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 2, 2016 ರೊಳಗೆ ಯಲ್ಲಾಪುರ, ಹಳಿಯಾಳ ತಾಲೂಕನ್ನು ಹಾಗೂ ಅಂಕೋಲಾ ಡೊಂಗ್ರಿ, ಕುಮಟಾ ಬಾಡ, ಕಾರವಾರ ಮುಡಗೇರಿ, ಹೊನ್ನಾವರ ಹೊಸಾಕುಳಿ, ಭಟ್ಕಳ ಕೋಣಾರ, ಶಿರಸಿ ಹುತ್ತಗಾರ, ಸಿದ್ದಾಪುರ ಬಿಳಗಿ, ಮುಂಡಗೋಡ ಹುನಗುಂದ, ಜೋಯಿಡಾ ಕಲಂಬೊಳಿ ಗ್ರಾಮ ಪಂಚಾಯತ್‌ಗಳನ್ನು ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರ, ಹಳಿಯಾಳ ತಾಲೂಕು ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಉಪಕಾರ್ಯದರ್ಶಿ ಆರ್. ಜಿ. ನಾಯಕ, ಜಿಲ್ಲೆಯಲ್ಲಿ ಮುಂದಿನ ಒಂದು ವರ್ಷದೊಳಗೆ 60 ಸಾವಿರ ಶೌಚಾಲಯವನ್ನು ನಿರ್ಮಿಸಿ ಬಯಲು ಮಲವಿಸರ್ಜನಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಆರ್ಥಿಕವಾಗಿ ದುರ್ಬಲವಿರುವ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಬ್ಯಾಂಕ್‌ಗಳ ಮೂಲಕ ಮುಂಗಡ ಸಾಲ ಸೌಲಭ್ಯಗಳು ಬೇಕಾದರೆ, ಅಂತಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ನೀಡಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದರು.
ಶೌಚಾಲಯ ನಿರ್ಮಿಸಲು ಸಾಮಗ್ರಿಗಳ ಸರಬರಾಜಿಗೆ ತೊಂದರೆಗಳಿದ್ದರೆ ರೆಡಿಮೇಡ್ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಹಾಗೂ ಶೌಚಾಲಯ ನಿರ್ಮಿಸಲು ಸ್ಥಳದ ಅಭಾವವಿರುವ ಫಲಾನುಭವಿಗಳು ಗುಂಪು ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ರೇಣಕೆ ಕಾರ್ಯಾಗಾರ ಉದ್ಘಾಟಿಸಿದರು. ಸ್ವಚ್ಛತೆ ಶೌಚಾಲಯದಲ್ಲಿ ನೂರಕ್ಕೆ ನೂರರಷ್ಟು ಗುರಿ ತಲುಪಲು ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ಬಗ್ಗೆ ಮುರ್ಕವಾಡ ಮತ್ತು ಉಮ್ಮಚಗಿ ಗ್ರಾಪಂ ಅಧ್ಯಕ್ಷರು ಅಭಿಪ್ರಾಯ ಹಂಚಿಕೊಂಡರು. ಜಿಲ್ಲಾ ಸಮಾಲೋಚಕ ಸೂರ್ಯನಾರಾಯಣ ಭಟ್ ಪ್ರೋತ್ಸಾಹ ಧನ ಪಾವತಿ ಬಗ್ಗೆ ವಿವರಿಸಿ,ಬೇಸ್‌ಲೈನ್ ಸರ್ವೆಯಲ್ಲಿ ಹೆಸರಿರುವ ಅರ್ಹ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ 12ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡ ಕುಟುಂಬಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.







