ಭಾರೀ ಮಳೆ: ಮಣ್ಣು ಅಗೆಯದಂತೆ ಮಡಿಕೇರಿ ನಗರಸಭೆ ಸೂಚನೆ
ಮಡಿಕೇರಿ, ಜೂ.28: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದೆ. ಮಡಿಕೇರಿ ನಗರದ ಸುತ್ತಮುತ್ತಲ ಬಡಾವಣೆಗಳಲ್ಲಿ ಬರೆ ಕುಸಿತ, ಭೂಕುಸಿತ ಉಂಟಾಗಿ ಹಾನಿ ಸಂಭವಿಸುವ ಸಾಧ್ಯತೆಗಳಿದೆ.
ಮನೆ, ಕಟ್ಟಡ ನಿರ್ಮಾಣ ಮಾಡಲು ಪ್ರಾರಂಭಿಸುವ ಕಟ್ಟಡ ಮಾಲಕರು ಮಣ್ಣು ಅಗೆಯುವ ಕೆಲಸವನ್ನು ತಕ್ಷಣ ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಮನವಿ ಮಾಡಿದ್ದಾರೆ. ಶಿಥಿಲಗೊಂಡಿರುವ ಕಟ್ಟಡ ಕೆಡುವುದು ಕೂಡ ಮಳೆಗಾಲದಲ್ಲಿ ಅಪಾಯಕಾರಿಯಾಗಿದ್ದು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆೆ. ಇದನ್ನು ಧಿಕ್ಕರಿಸಿ ಕಾಮಗಾರಿಯನ್ನು ಕೈಗೊಂಡಲ್ಲಿ ಈಗಾಗಲೇ ನೀಡಲಾಗಿರುವ ಪರವಾನಿಗೆಯನ್ನು ಮುನ್ಸೂಚನೆ ಇಲ್ಲದೇ ರದ್ದುಗೊಳಿಸಲಾಗುವುದು ಹಾಗೂ ಪಾವತಿಸಿರುವ ಫೀ ಮತ್ತು ಇನ್ನಿತರೆ ತೆರಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
ಹಾಗೆಯೇ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಯಾವುದಾದರೂ ಅನಾಹುತ, ಅವಘಡಗಳು ಸಂಭವಿಸಿದಲ್ಲಿ ನಗರಸಭೆ ವತಿಯಿಂದ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಜೀವ ಹಾನಿ ಇತ್ಯಾದಿ ಯಾವುದೇ ಅವಘಡಗಳು ಸಂಭವಿಸದಿರಲು ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ತಿಳಿಸಿದ್ದಾರೆ.





