ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ನಗರಸಭೆ ಸ್ಥಳೀಯರಿಂದ ಪ್ರತಿಭಟನೆ
.jpg)
ಸಾಗರ, ಜೂ.28: ಕಳೆದ ಒಂದು ತಿಂಗಳಿನಿಂದ ನಗರದ ಆರ್‌ಪಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಜನ ಹಾಗೂ ವಾಹನ ಸಂಚಾರ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು. ಇದೇ ಸಂದರ್ಭದಲ್ಲಿ ಸ್ಥಳ ಪರಿಶೀಲನೆಗೆ ಬಂದಿದ್ದ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್ ಹಾಗೂ ಪ್ರಭಾರ ಕಾರ್ಯಪಾಲಕ ಅಭಿಯಂತರ ನಾಗಪ್ಪ ಅವರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಕುರಿತು ಮಾತನಾಡಿದ ಗಣಪತಿ ಕೆರೆ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಒಂದು ತಿಂಗಳಿನಿಂದ ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಮಧ್ಯಭಾಗದಲ್ಲಿ ಸುಮಾರು 18 ಅಡಿ ಆಳ ತೆಗೆದು ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಕಾಮಗಾರಿ ಮುಗಿದಿದ್ದರೂ ಮಣ್ಣು ಮುಚ್ಚಿಲ್ಲ. ಕಾಮಗಾರಿ ಗುತ್ತಿಗೆ ಪಡೆದವರ ವಿಳಂಬ ನೀತಿಯೆ ಇದಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 8-10 ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದು,್ದ ರಸ್ತೆಯ ಮಧ್ಯಭಾಗದಲ್ಲಿರುವ ಮಣ್ಣು ಚರಂಡಿ ಸೇರಿದ್ದು, ಚರಂಡಿ ನೀರು ಅಂಗಡಿ, ದೇವಸ್ಥಾನದೊಳಗೆ, ಮನೆಯೊಳಗೆ ಹರಿಯುತ್ತಿದೆ. ಸುತ್ತಮುತ್ತಲಿನ ಬಾವಿಗಳಿಗೆ ಚರಂಡಿಯಿಂದ ಹರಿಯುವ ಕಲುಷಿತ ನೀರು ಸೇರುತ್ತಿದೆ. ಕಾಮಗಾರಿ ಸಂದರ್ಭ ನಲ್ಲಿ, ಪೈಪ್‌ಗಳು ಒಡೆದಿರುವುದರಿಂದ ಈ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಆದರೆ ರಸ್ತೆ ಅಗೆದಿರುವುದರಿಂದ ಒಂದು ತಿಂಗಳಿನಿಂದ ಅಂಗಡಿ ಮುಚ್ಚಿ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಈ ರಸ್ತೆಯಲ್ಲಿ ಬರುವ ಸೇವಾಸಾಗರ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಬರಲು ಸಾಧ್ಯವಾಗದೆ ಇರುವುದರಿಂದ ಕಳೆದ ಎರಡು ದಿನಗಳಿಂದ ರಜೆ ನೀಡಲಾಗಿದೆ. ಒಟ್ಟಾರೆ ನಗರಸಭೆ ಆಡಳಿತ ಜನಸಾಮಾನ್ಯರಿಗೆ ಸ್ಪಂದಿಸದೆ ಕಿವುಡಾಗಿ ಕುಳಿತಿದೆ ಎಂದರು.
ಕಾಮಗಾರಿ ಮುಗಿದಿದ್ದರಿಂದ ರಸ್ತೆ ಸರಿ ಮಾಡಿ ಎಂದು ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸುತ್ತಿಲ್ಲ. ತಕ್ಷಣ ರಸ್ತೆ ಸರಿಪಡಿಸಿ, ಚರಂಡಿ ತೆರವುಗೊಳಿಸದೆ ಹೋದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದರು. ಈ ಸಂದರ್ಭದಲ್ಲಿ ಮಾರುತಿ, ಟೈಲರ್ ಮಂಜಣ್ಣ, ಅರುಣ ಬಾಪಟ್, ಅಶೋಕ್, ಚಂದ್ರಶೇಖರ್, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.







