ಸಾರಿಗೆ ಸಚಿವರಿಂದ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
ಮಿನಿ ಬಸ್‌ಗಳನ್ನು ಆರಂಭಿಸಲು ಮನವಿ

ಮೂಡಿಗೆರೆ, ಜೂ.28: ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಬೇಕಾದ ಬಸ್ಸುಗಳಲ್ಲಿ ಬೇರೆ ರಾಜ್ಯಗಳನ್ನು ಹೋಲಿಸಿದರೆ ಹೆಚ್ಚಿನ ಅನುಕೂಲ ಮತ್ತು ಉತ್ತಮ ಬಸ್ಸುಗಳನ್ನೊಳಗೊಂಡಿರುವ ರಾಜ್ಯವೆಂದರೆ ಅದು ಕರ್ನಾಟಕ ರಾಜ್ಯ ಮಾತ್ರ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಪಟ್ಟಣದ ಚರ್ಚ್ ಆವರಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗದಿಂದ ಹ್ಮಮಿಕೊಂಡಿದ್ದ ಮೂಡಿಗೆರೆ ನವೀಕೃತ ಬಸ್ ನಿಲ್ದಾಣದ ಉದ್ಘಾಟನೆ, ನಿಲ್ದಾಣದ ಆವರಣದ ಮೊದಲನೇ ಹಂತದ ಕಾಂಕ್ರಿಟೀಕರಣ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ 1.20 ಲಕ್ಷ ಸರಕಾರಿ ಬಸ್‌ಗಳು ಸಂಚರಿಸುತ್ತಿದ್ದು, ಅದರಲ್ಲಿ 24.ಸಾವಿರ ಬಸ್‌ಗಳು ನಮ್ಮ ರಾಜ್ಯದಲ್ಲಿ ಸಂಚರಿಸುತ್ತಿವೆ. ದಿನಕ್ಕೆ 1.20ಕೋಟಿ ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಬಹುತೇಕ ಎಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಒಡಾಡುತ್ತಿವೆ. ಇದರಿಂದ ಶೇ.40 ನಷ್ಟವಾಗುತ್ತಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯವನ್ನು ಉತ್ತಮವಾಗಿ ನೀಡುವ ಕೆಲಸ ಸರಕಾರ ಮಾಡುತ್ತಿದೆ ಎಂದರು.
ಆಲ್ದೂರು ಮತ್ತು ಕಳಸದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಜಾಗ ಗುರುತು ಮಾಡಿದರೆ ಈ ವರ್ಷವೇ ಹಣ ಬಿಡುಗಡೆ ಮಾಡುತ್ತೇವೆ. ಮೂಡಿಗೆರೆ ಬಸ್ ನಿಲ್ದಾಣದ ಶೌಚಾಲಯ ನವೀಕೃತಗೊಳಿಸಲು ಸಂಬಂಧಿಸಿದ ಅಧಿಕಾರಿಗಳೆಗೆ ಸೂಚಿಸಲಾಗಿದೆ. ಶಾಸಕ ಬಿ.ಬಿ.ನಿಂಗಯ್ಯ ಮತ್ತು ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಇವರು ಹೊಸ ಬಸ್‌ಗಳನ್ನು ಬಿಡುವಂತೆ ಸದನದಲ್ಲಿ ಒತ್ತಾಯಿಸಿದ್ದರು. ಅದರಂತೆ ಈ ವರ್ಷವೇ ಹೊಸ ಬಸ್‌ನ್ನು ಇಲ್ಲಿಗೆ ನೀಡುತ್ತೇವೆ. ಮಲೆನಾಡು ಭಾಗಕ್ಕೆ ಮಿನಿಬಸ್‌ಗಳ ಅಗತ್ಯವಿದ್ದು, ಮಿನಿ ಬಸ್‌ಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಕರಾವಳಿ ಮತ್ತು ಮಲೆನಾಡು ಭಾಗಗಳು ಬೆಟ್ಟಗುಡ್ಡಗಳಿಂದ ಕೂಡಿದ್ದಾರುವುದರಿಂದ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸಲು ಮಿನಿ ಬಸ್‌ಗಳ ಆವಶ್ಯಕತೆ ಇದೆ. ಎಲ್ಲ ರಾಜ್ಯದಾದ್ಯಂತ ಕೆಎಸ್ಸಾರ್ಟಿಸಿ ನಂಬರ್ ಒನ್ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳಸ ಮತ್ತು ಆಲ್ದೂರಿನಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ಹಾಸನ ಮಾದರಿಯ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, ಮಲೆನಾಡು ಪ್ರದೇಶಕ್ಕೆ ಹಳೆ ಗಾಡಿಗಳು ಕೊಟ್ಟರೆ ಅವು ಅಲ್ಲಲ್ಲಿ ಕೆಟ್ಟು ನಿಲ್ಲುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹೊಸ ಬಸ್‌ಗಳನ್ನೇ ನೀಡಬೇಕು ಎಂದ ಅವರು, ಈ ಕ್ಷೇತ್ರದಲ್ಲಿ ಹೆಚ್ಚಾಗಿ ಬಡ ಮಕ್ಕಳು ಇರುವುದರಿಂದ ಶೇ.50 ರಷ್ಟು ಕಡಿಮೆ ದರದಲ್ಲಿ ಬಸ್ ಪಾಸ್ ನೀಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಈ ಸಂದಭರ್ದಲ್ಲಿ ಮಾಜಿ ಶಾಸಕ ಕುಮಾರಸ್ವಾಮಿ, ಸಿಡಿಎ ಅಧ್ಯಕ್ಷ ಚಂದ್ರೇಗೌಡ, ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್, ನಿಕಿಲ್ ಚರ್ಕವರ್ತಿ, ತಾಪಂ ಅಧ್ಯಕ್ಷ ರತನ್ ಕುಮಾರ್, ಸದಸ್ಯರಾದ ರಂಜನ್ ಅಜೀತ್ ಕುಮಾರ್, ಮಹೇಶ್, ಪಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಮದೀಶ್, ಹೌಸಿಂಗ್ ಬೋರ್ಡ್ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ, ಡಿ.ಆರ್.ಉಮಾಪತಿ, ಲಕ್ಷ್ಮಣ್‌ಗೌಡ, ಎಂ.ಪಿ.ಮನು, ಜಯರಾಂಗೌಡ, ಬಿ..ಎನ್.ಎಸ್.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.







