ಶಿವಮೊಗ್ಗ: ತುಂಗಾ ಡ್ಯಾಂ ಭರ್ತಿ
ಹೊಸಪೇಟೆ ಡ್ಯಾಂಗೆ ನೀರು ಬಿಡುಗಡೆ
ಶಿವಮೊಗ್ಗ, ಜೂ.28: ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. ಈ ನಡುವೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಮಂಗಳವಾರ ಮಧ್ಯಾಹ್ನ ಗರಿಷ್ಠ ಮಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಡ್ಯಾಂನ ಎರಡು ಕ್ರಸ್ಟ್‌ಗೇಟ್ ತೆರೆದು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ 1 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 4,109 ಕ್ಯೂಸೆಕ್ಸ್ ಇದ್ದು, ನೀರಿನ ಮಟ್ಟವು 588.24 ಅಡಿ ಗರಿಷ್ಠ ಮಟ್ಟಕ್ಕೆ ತಲುಪುತ್ತಿದ್ದಂತೆ ಎರಡು ಕ್ರಸ್ಟ್‌ಗೇಟ್ ತೆರೆದು ನೀರು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಜೂನ್ ಮಧ್ಯಂತರದಲ್ಲಿಯೇ ಡ್ಯಾಂನಿಂದ ನೀರನ್ನು ಹೊರ ಬಿಡಲಾಗಿತ್ತು. ಪ್ರಸ್ತುತ ವರ್ಷ ಮುಂಗಾರು ಮಳೆ ದುರ್ಬಲವಾಗಿದ್ದ ಕಾರಣದಿಂದ ಡ್ಯಾಂ ಭರ್ತಿ ವಿಳಂಬವಾಗಿದೆ ಎಂದು ಜಲಾಶಯ ವ್ಯಾಪ್ತಿಯ ಇಂಜಿನಿಯರ್ ತಿಳಿಸಿದ್ದಾರೆ. ಇತರೆ ಡ್ಯಾಂಗಳಿಗೆ ಹೋಲಿಕೆ ಮಾಡಿದರೆ ತುಂಗಾ ಜಲಾಶಯವು ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿದೆ. 3.24 ಟಿ.ಎಂ.ಸಿ. ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 22 ಕ್ರಸ್ಟ್‌ಗೇಟ್‌ಗಳಿವೆ. ಇದರಿಂದ ಪ್ರತಿವರ್ಷ ಸಾಧಾರಣ ಮಳೆಗೆ ಈ ಡ್ಯಾಂ ಗರಿಷ್ಠ ಮಟ್ಟ ತಲುಪುತ್ತದೆ ಎಂದು ಡ್ಯಾಂ ವ್ಯಾಪ್ತಿಯ ಇಂಜಿನಿಯರ್ ಅಭಿಪ್ರಾಯಪಡುತ್ತಾರೆ. ಹೆಚ್ಚಳ: ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಮಂಗಳವಾರದ ಮಾಹಿತಿಯ ಪ್ರಕಾರ 13,414 ಕ್ಯೂಸೆಕ್ಸ್ ಒಳಹರಿವಿದೆ. 1,463ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 87 ಮಿ.ಮೀ. ಮಳೆಯಾಗಿದೆ. ಡ್ಯಾಂನ ನೀರಿನ ಮಟ್ಟ 1,755.90 (ಗರಿಷ್ಠ ಮಟ್ಟ : 1,819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ 1,769.65 ಅಡಿಯಿತ್ತು. ಭದ್ರಾ ಜಲಾಶಯದ ನೀರಿನ ಮಟ್ಟ 116.10 (ಗರಿಷ್ಠ ಮಟ್ಟ : 186) ಅಡಿಯಿದೆ. 3,312 ಕ್ಯೂಸೆಕ್ಸ್ ಒಳಹರಿವಿದ್ದು, 95 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 15 ಮಿ.ಮೀ. ವರ್ಷಧಾರೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 151 ಅಡಿ ನೀರು ಸಂಗ್ರಹವಾಗಿತ್ತು. ಮಳೆ ವಿವರ: ಮಂಗಳವಾರ ಬೆಳಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಒಟ್ಟಾರೆ ಸರಾಸರಿ ಪ್ರಮಾಣ 25.66 ಮಿ.ಮೀ. ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಧಾರಾಕಾರ ವರ್ಷಧಾರೆಯಾಗಿದ್ದು, ಇತರೆಡೆ ಸಾಧಾರಣ ಪ್ರಮಾಣದಲ್ಲಿದೆ. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ 7.40 ಮಿ.ಮೀ., ಭದ್ರಾವತಿಯಲ್ಲಿ 6 ಮಿ.ಮೀ., ತೀರ್ಥಹಳ್ಳಿಯಲ್ಲಿ 60.4 ಮಿ.ಮೀ., ಸಾಗರದಲ್ಲಿ 43.60 ಮಿ.ಮೀ. ಶಿಕಾರಿಪುರದಲ್ಲಿ 9.80 ಮಿ.ಮೀ., ಸೊರಬದಲ್ಲಿ 2.40 ಮಿ.ಮೀ. ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 50 ಮಿ.ಮೀ. ವರ್ಷಧಾರೆಯಾಗಿದೆ.





