ಮಾದಕ ವಸು್ತಗಳ ಜಾಲಗಳಿಗೆ ಕಡಿವಾಣ ಹಾಕಬೇಕಿದೆ: ಎಂ.ಎಸ್.ಅನಂತ್
 mdg news ph.jpg)
ಮೂಡಿಗೆರೆ, ಜೂ.28: ಹದಿ ಹರೆಯದ ವಯಸ್ಸಿನ ಮಕ್ಕಳಲ್ಲಿ ಬುದ್ಧಿ ಚಂಚಲತೆ ಇರುತ್ತದೆ. ಆ ವೇಳೆಯಲ್ಲಿ ಜಾಗರೂಕತೆ ವಹಿಸಿದರೆ ಉತ್ತಮ ಪ್ರಜೆಯಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದು ಮದ್ಯಪಾನ ಸಂಯಮ ಮಂಡಳಿಯ ನಿರ್ದೇಶಕ ಎಂ.ಎಸ್.ಅನಂತ್ ತಿಳಿಸಿದರು.
ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಮಧ್ಯವ್ಯಸನ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಕಾಲೇಜಿನಲ್ಲಿ ಅನಿಕೇತನ ಸಮಾಜ ಕಲ್ಯಾಣ ಕೇಂದ್ರ, ಶಾಂತಿ ವ್ಯಸನ ಮುಕ್ತಿ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲದ ಮಕ್ಕಳು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹದಿಹರೆಯದ ಪ್ರಾಯದಲ್ಲಿ ಇಂತಹ ದುಶ್ಚಟಗಳಿಗೆ ಬಲಿಯಾಗುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳ ಬಗ್ಗೆ ಹೆಚ್ಚಿನ ನಿಯಂತ್ರಣ ವಹಿಸಿದರೆ ಮುಂದೆ ಒಳ್ಳೆಯ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಬಹುತೇಕ ಕಡೆಗಳಲ್ಲಿ ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ. ಕುಡಿತದಿಂದ ಮನೆಗಳಲ್ಲಿ ನೆಮ್ಮದಿ ಹಾಳಾಗುತ್ತದೆಯೇ ಹೊರತು ಉದ್ದಾರವಾಗಲು ಸಾಧ್ಯವಿಲ್ಲ. ಮಾದಕ ವಸ್ತುಗಳನ್ನು ಬಳಸಲು ಸರಕಾರವೇ ಉತ್ತೇಜನ ನೀಡುವುದರಿಂದ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರಕಾರ ಮಾದಕ ವಸ್ತುಗಳ ತಯಾರಿಕೆ ಮತ್ತು ಮಾರಾಟ ನಿಷೇಧಿಸಿದರೆ ಕೊಂಚ ಮಟ್ಟಿಗಾದರೂ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನತೆಯನ್ನು ಉಳಿಸಿಕೊಳ್ಳಬಹುದು. ಮಾದಕ ವಸ್ತಗಳ ಬಳಕೆಯನ್ನು ಪ್ರತಿಯೊಬ್ಬರೂ ನಿಲ್ಲಿಸಿದರೆ ಉತ್ತಮ ಸಮಾಜ ಹಾಗೂ ಮಾದಕ ವಸ್ತುಗಳ ಜಾಲ ಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಯನ ತಳವಾರ ಮಾತನಾಡಿ, ಸರಕಾರಿ ಶಾಲೆಗಳಿಗಿಂತ ಹೆಚ್ಚಾಗಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪೋಷಕರು ಹೆಚ್ಚಿನ ಗಮನಹರಿಸಬೇಕಾಗಿದೆ. ಅಲ್ಲದೆ ದುಶ್ಚಟ ಬೆಳೆಸಿಕೊಂಡಿರುವವರ ಸಂಘ ಬೆಳೆಸಿದರೆ ಒಳ್ಳೆಯವರೂ ಕೂಡ ಅದಕ್ಕೆ ಬಲಿಯಾಗುತ್ತಾರೆ.ಒಮ್ಮೆ ದುಶ್ಚಟಕ್ಕೆ ಬಲಿಯಾದರೆ ಅದರಿಂದ ಹೊರ ಬರುವುದು ಕಷ್ಟಕರವಾಗುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ಪಿಎಸ್‌ಐ ಗವಿರಾಜ್ ಮಾತನಾಡಿ, ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ಮಧ್ಯಪಾನ ಮಾಡುವುದು ಕಂಡು ಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಲ್ಲಿ ಇಲಾಖೆ ಸಂಪೂರ್ಣ ಶ್ರಮ ವಹಿಸುತ್ತಿದೆ. ತಾಲೂಕಿನೊಳಗೆ ಎಲ್ಲಿಯಾದರೂ ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಯ ಸಾಮಾಜಿಕ ಸೇವಾ ಸಂಸ್ಥೆಯ ಮಹಾಪೋಷಕ ಹೇಮಶೇಖರ್ ವಹಿಸಿದ್ದರು. ಅನಿಕೇತನ ಸಮಾಜ ಕೇಂದ್ರದ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಜೇಸಿ ಅಧ್ಯಕ್ಷ ಎಂ.ಎಸ್.ಅಶೋಕ್, ಪ್ರಾಂಶುಪಾಲ ದಿನೇಶ್, ಕಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು.







