ಜಿಲ್ಲಾಧಿಕಾರಿ ಷಡಕ್ಷರಿ ವರ್ಗಾವಣೆ ರದ್ದುಗೊಳಿಸುವಂತೆ ಮನವಿ
ಚಿಕ್ಕಮಗಳೂರು,ಜೂ.28: ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ ವರ್ಗಾವಣೆಯನ್ನು ರದ್ದುಗೊಳಿಸುವ ಮೂಲಕ ಕರ್ತವ್ಯನಿರತ ಸ್ಥಳದಲ್ಲೇ ಮುಂದುವರೆಸುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಮುಖಂಡರು ಸರಕಾರಕ್ಕೆ ಮನವಿ ನೀಡಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‌ಪಿ, ಸಿಪಿಐ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿಯವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿಯವರು ಸೌಮ್ಯ ಸ್ವಭಾವದ ಪ್ರಾಮಾಣಿಕ ವ್ಯಕ್ತಿತ್ವದ ಅಪರೂಪದ ಅಧಿಕಾರಿಯಾಗಿ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ಅಕ್ರಮ ಫೈಲ್‌ಗಳಿಗೆ ಸಹಿಹಾಕದೆ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದರು. ಇದನ್ನು ಸಹಿಸಲಾಗದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ನಡೆಸಿ ಪ್ರಾಮಾಣಿಕರನ್ನು ವರ್ಗಾವಣೆ ಮಾಡುವ ಹುನ್ನಾರಕ್ಕೆ ಮುಂದಾಗಿರುವುದು ದುರ್ಧೈವ ಎಂದು ತಿಳಿಸಿದ್ದಾರೆ.
ಯಾವುದೇ ಆರೋಪಗಳಿಲ್ಲದೆ ಸಾಮಾನ್ಯ ಜನರಿಗೆ ಹತ್ತಿರವಾಗಿ ಹಾಗೂ ಜಿಲ್ಲೆಯ ಅಭಿವೃದ್ಧ್ದಿಗೆ ಸಹಕರಿಸುತ್ತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ದಿಢೀರ್ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿರುವ ಮುಖಂಡರು ಸರಕಾರ ಯಾರ ಷಡ್ಯಂತ್ರಕ್ಕೂ ಮಣಿಯದೆ ಷಡಕ್ಷರಿಸ್ವಾಮಿಯವರ ವರ್ಗಾವಣೆಯನ್ನು ಕೂಡಲೆ ರದ್ದುಗೊಳಿಸಿ ಚಿಕ್ಕಮಗಳೂರಿನಲ್ಲೇ ಮುಂದುವರಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಎಚ್ಚರಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಬಿಎಸ್‌ಪಿ ಜಿಲ್ಲಾ ಸಂಚಾಲಕ ಕೆ.ಟಿ.ರಾಧಾಕೃಷ್ಣ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ, ದಲಿತ ಸಂಘರ್ಷ ಸಮಿತಿಯ ಎನ್.ಪಿ.ಈಶ್ವರ್, ಅಣ್ಣಯ್ಯ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶ್ ಮುಖಂಡರಾದ ವರಸಿದ್ದಿ ವೇಣುಗೋಪಾಲ್, ರವೀಶ್ ಬಸಪ್ಪ, ಶಿವಾನಂದಸ್ವಾಮಿ, ಮುಹಮ್ಮದ್ ಅನ್ವರ್, ಎಲ್.ವಿ.ಬಸವರಾಜು, ಕೋಟೆ ಈಶ್ವರಪ್ಪ, ವೀರೇಶ್, ಪವನ್ ಮತ್ತಿತರರು ಉಪಸ್ಥಿತರಿದ್ದರು.







