ಅರ್ನಬ್ ಪ್ರಧಾನಿ ಸಂದರ್ಶನ ಫಿಕ್ಸ್ !
ವೆಬ್ ಸೈಟ್ ವರದಿ ವೈರಲ್

ಹೊಸದಿಲ್ಲಿ , ಜೂ.28: ಟೈಮ್ಸ್ ನೌ ಸಂಪಾದಕ ಅರ್ನಬ್ ಗೋಸ್ವಾಮಿ ಇತ್ತೀಚಿಗೆ ನಡೆಸಿದ ಬಹುಚರ್ಚಿತ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ' ಫಿಕ್ಸ್ ' ಆಗಿತ್ತು ! ಹೀಗೆಂದು ವೆಬ್ ಸೈಟ್ ಒಂದು ವರದಿ ಮಾಡಿದ್ದು ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ.
http://www.khabarbar.com ಎಂಬ ವೆಬ್ ಸೈಟ್ ಜೂನ್ 28 ರಂದು ಪ್ರಕಟಿಸಿರುವ ಈ ವರದಿಯಲ್ಲಿ ಟೈಮ್ಸ್ ನೌ ವಾಹಿನಿಯ ಹಿರಿಯ ಪತ್ರಕರ್ತನೊಬ್ಬ ಈ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಪತ್ರಕರ್ತ ಪ್ರಧಾನಿ ಸಂದರ್ಶನಕ್ಕೆ ಸಿದ್ಧತೆ ಮಾಡಲು ಅರ್ನಬ್ ರಚಿಸಿದ ವಿಶೇಷ ಸಮಿತಿಯಲ್ಲಿ ಇದ್ದರೆಂದೂ ವರದಿ ಹೇಳಿದೆ. ಆದರೆ ಈ ಪತ್ರಕರ್ತ ಅನಾಮಿಕನಾಗಿಯೇ ಉಳಿಯಲು ಬಯಸಿದ್ದಾರೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ ' ಎರಡು ವಾರಗಳ ಹಿಂದೆ ಪ್ರಧಾನಿಯ ಸಂದರ್ಶನ ನಡೆಸಲು ಅರ್ನಬ್ ಗೆ ಪ್ರಧಾನಿ ಕಚೇರಿಯಿಂದ ಒಪ್ಪಿಗೆ ಸಿಕ್ಕಿತ್ತು. ಸಂದರ್ಶನಕ್ಕೆ ಐದು ದಿನಗಳ ಮೊದಲು ಪ್ರಧಾನಿ ಕಚೇರಿಯಿಂದ ಪ್ರಶ್ನೆಗಳನ್ನು ಯಾವುದರ ಬಗ್ಗೆ ಕೇಳಬಹುದು ಎಂಬುದಕ್ಕೆ ಕೆಲವು ಕಾಗದ ಪತ್ರಗಳು ಹಾಗೂ ವಿಷಯಗಳ ಪಟ್ಟಿಯನ್ನು ಅರ್ನಬ್ ಗೆ ಕಳಿಸಲಾಗಿತ್ತು.
ಅದನ್ನು ಪರಿಶೀಲಿಸಿದ ಟೈಮ್ಸ್ ನೌ ವಾಹಿನಿಯ ವಿಶೇಷ ತಂಡ ಪ್ರಶ್ನೆಗಳನ್ನು ಸಿದ್ಧ ಮಾಡಿ ಮತ್ತೆ ಪ್ರಧಾನಿ ಕಚೇರಿಗೆ ಕಳಿಸಿತು. ಈ ಪ್ರಶ್ನೆಗಳನ್ನು ಪರಿಶೀಲಿಸಿದ ಪಿಎಂಒ ಅವುಗಳಲ್ಲಿ ಬೇಕಾದ ಬದಲಾವಣೆ ಮಾಡಿ ಪ್ರಧಾನಿಯ ಉತ್ತರಗಳನ್ನು ಟೈಮ್ಸ್ ನೌ ಗೆ ಕಳಿಸಿತು. ಮತ್ತು ಉತ್ತರದ ನಡುವೆ ಎಲ್ಲಿ ಅರ್ನಬ್ ಪ್ರಧಾನಿಗೆ ಉಪಪ್ರಶ್ನೆಗಳನ್ನು ಕೇಳಬಹುದು ಎಂದು ಸೂಚಿಸಿತು.
ಅರ್ನಬ್ ರ ಪ್ರಧಾನಿ ಸಂದರ್ಶನದ ಕುರಿತು ಈಗಾಗಲೇ ಸಾಕಷ್ಟು ಟೀಕೆ, ವ್ಯಂಗ್ಯ ವ್ಯಕ್ತವಾಗಿದೆ. ' ಅರ್ನಬ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿ ಬಿಟ್ಟು ಪ್ರಧಾನಿ ಜೊತೆ ಅಗತ್ಯಕ್ಕಿಂತ ಹೆಚ್ಚೇ ಸೌಜನ್ಯಯುತವಾಗಿ ವರ್ತಿಸಿದರು, ಬಹಳ ಮೃದುವಾಗಿದ್ದರು. ಹಾಗಾಗಿ ಇದು ಫಿಕ್ಸ್ ಆದ ಸಂದರ್ಶನ ' ಎಂದು ಬಹಳಷ್ಟು ಜನರು ಆರೋಪ ಮಾಡಿದ್ದರು. ಇದೀಗ ವೆಬ್ ಸೈಟ್ ಒಂದು ' ಮೂಲಗಳನ್ನು ಉಲ್ಲೇಖಿಸಿ' ವರದಿಯನ್ನೇ ಪ್ರಕಟಿಸಿದೆ.
ಆ ವೆಬ್ ಸೈಟ್ ವರದಿಯ ಲಿಂಕ್ ಇಲ್ಲಿದೆ :
http://www.khabarbar.com/politics/revealed-the-inside-story-of-modis-interview-with-arnab







