‘ಮಕ್ಕಳಲ್ಲಿ ನೈತಿಕತೆ ಬೆಳೆಸಲು ಸ್ವದೇಶಿ ಶಿಕ್ಷಣ ಅಗತ್ಯ’

ಚಿಕ್ಕಮಗಳೂರು, ಜೂ.28 ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರಗಳು ಇಂಟರ್‌ನ್ಯಾಶನಲ್ ಶಾಲೆಗಳನ್ನು ಬಿಟ್ಟು, ನಿಸರ್ಗದ ನಡುವೆ ಸ್ವದೇಶಿ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ನೀಡಿದರು.
ಕಡೂರು ತಾಲೂಕಿನ ಬಿಳುವಾಲದ ಸರಕಾರಿ ಪ್ರೌಢಶಾಲೆಯಲ್ಲಿ ಲಕ್ಷ್ಮೀಶ ಕನ್ನಡ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ನೈತಿಕ ಶಿಕ್ಷಣದ ಅಗತ್ಯತೆ ಕುರಿತು ಅವರು ಉಪನ್ಯಾಸ ನೀಡಿದರು. ಇತ್ತೀಚೆಗೆ ಎಲ್ಲಿ ನೋಡಿದರಲ್ಲಿ ವಿದೇಶಿ ಶಿಕ್ಷಣ ನೀಡುವ ಇಂಟರ್ ನ್ಯಾಶನಲ್ ಶಾಲೆಗಳು ತಲೆಎತ್ತುತ್ತಿವೆ ಆ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದರಿಂದಾಗಿ ನಮ್ಮ ಮಕ್ಕಳಲ್ಲಿ ಕನ್ನಡದ ಕಂಪು ಕಾಣೆಯಾಗುತ್ತಿದೆ ಎಂದು ವಿಷಾದಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಶಿಕ್ಷಣ ದೊರೆಯುತ್ತಿದೆ. ಇದರಿಂದಾಗಿ ಹಳ್ಳಿ ಮಕ್ಕಳಲ್ಲಿ ನೈತಿಕತೆ ಉಳಿದಿದೆ ಎಂದ ಅವರು, ನಗರಗಳಲ್ಲಿ ನಿಸರ್ಗವೇ ಉಳಿದಿಲ್ಲ, ಬಾರ್, ಪಬ್, ಕ್ಲಬ್‌ಗಳ ನಡುವೆ ಇಂಟರ್ ನ್ಯಾಶನಲ್ ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇಂಟರ್ ನ್ಯಾಶನಲ್ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದಾಗಿ ಇಂದಿನ ಮಕ್ಕಳು ತಂದೆ, ತಾಯಿ, ದೇಶ, ಭಾಷೆ ಹಾಗೂ ಆತ್ಮೀಯ ಸಂಬಂಧಗಳನ್ನು ಭಾವನೆಗಳನ್ನು ಮರೆಯುತ್ತಿದ್ದಾರೆ. ನೈತಿಕ ಶಿಕ್ಷಣ ವಿಲ್ಲದೆ ಅನಾಗರಿಕರಾಗಿ ರೂಪುಗೊಳ್ಳುತ್ತಿದ್ದಾರೆ ಎಂದ ಅವರು ಈ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಇನ್ನು ಹತ್ತಾರು ವರ್ಷಗಳಲ್ಲಿ ನೈತಿಕತೆ ಮತ್ತು ಕನ್ನಡ ಎಂದರೆ ಏನು ಎಂದು ಮಕ್ಕಳು ಕೇಳುವ ದುರ್ಗತಿ ಬರುತ್ತದೆ ಎಂದು ಎಚ್ಚರಿಸಿದರು.
ಮಕ್ಕಳಲ್ಲಿ ನೈತಿಕತೆ ಬೆಳೆಸುವುದು ಇಂದು ಅತ್ಯಂತ ಅಗತ್ಯವಾಗಿದೆ ಈ ಹಿನ್ನೆಲೆಯಲ್ಲಿ ಅವರಿಗೆ ನೈಸರ್ಗಿಕವಾಗಿ ಸ್ವದೇಶಿ ಶಿಕ್ಷಣ ನೀಡಬೇಕಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಕೆ.ವಿ.ಚಂದ್ರವೌಳಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನೈತಿಕತೆಯನ್ನೂ ಕಲಿಯಬೇಕು ಮಾತೃಭಾಷೆಗೆ ಆದ್ಯತೆ ನೀಡುವ ಮೂಲಕ ರಾಜ್ಯದಲ್ಲಿ ಕನ್ನಡವನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೀಶ ಕನ್ನಡ ಸಂಘದ ಖಜಾಂಚಿ ಮಂಜೇಶ್ ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಲೋಕೇಶ್ವರ್ ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್ ಗ್ರಾಪಂ ಅಧ್ಯಕ್ಷೆ ಹೇಮಲತಾ, ಸದಸ್ಯೆ ಸಲ್ಮಾಬಿ, ಶಿಕ್ಷಕರಾದ ಜಿ.ಎಂ.ಮಲ್ಲಿಕಾರ್ಜುನ್, ವೈ.ಎಚ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.







