ಜಿಲ್ಲಾಸ್ಪತ್ರೆ ಎದುರು ಮೃತದೇಹವಿಟ್ಟು ಧರಣಿ
ಮಡಿಕೇರಿ: ವೈದ್ಯರ ನಿರ್ಲಕ್ಷಕ್ಕೆ ಬಾಲಕಿ ಸಾವು ಆರೋಪ

ಮಡಿಕೆೇರಿ, ಜೂ.28: ಅಪೆಂಡಿಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಣಿವೆ ನಿವಾಸಿ ಕುಮಾರಿ ಮಮತಾ ಎಂಬಾಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಡರು ಜಿಲ್ಲಾಸ್ಪತ್ರೆಯ ಎದುರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಮಮತಾ ಎಂಬ ಬಾಲಕಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯಾಧಿಕಾರಿಯೊಬ್ಬರ ತಪ್ಪಿನಿಂದಾಗಿ ರೋಗ ಉಲ್ಬಣಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು ಇದಕ್ಕೆ ಜಿಲ್ಲಾ ಆಸ್ಪತ್ರೆಯ ವೈದ್ಯರೇ ನೇರ ಹೊಣೆ ಎಂದು ಧರಣಿ ನಿರತರು ಆರೋಪಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ವೇಳೆ ಎಸ್ಪಿ ರಾಜೇಂದ್ರ ಪ್ರಸಾದ್ ಧರಣಿ ನಿರತರನ್ನು ಸಂತೈಸಿ ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸುವ ಭರವಸೆ ನೀಡಿದ ಬಳಿಕ ಧರಣಿಯನ್ನು ಕೈಬಿಡಲಾಯಿತು.





