ಪಂಜಿಮೊಗರು ಜೋಡಿ ಕೊಲೆ ಆರೋಪಿಗಳನ್ನು ಇನ್ನಾದರೂ ಪತ್ತೆ ಹಚ್ಚಿ
ಮಾನ್ಯರೆ,
ರಾಜ್ಯದ ಜನತೆಯು ಬೆಚ್ಚಿ ಬೀಳುವಂತೆ ಮಾಡಿದ್ದ ಪಂಜಿಮೊಗರು ಜೋಡಿ ಕೊಲೆ ನಡೆದು ಜೂನ್ 28 ರಂದು ಐದು ವರ್ಷಗಳಾಗುತ್ತಿದೆ ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ. ಮುಗ್ಧ ತಾಯಿ ಮಗುವಿನ ಕೊಲೆ ಹಾಡ ಹಗಲೇ ನಡೆದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾದಾಗ ಪಂಜಿಮೊಗರಿನ ನಾಗರಿಕರು ಡಿ.ವೈ.ಎಫ್.ಐ. ಜೊತೆ ಸೇರಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹಲವಾರು ಪ್ರತಿಭಟನೆ ಕಾಲ್ನಡಿಗೆ ನಡೆಸಿ ಪ್ರಕರಣ ಸಿ.ಐ.ಡಿ.ಗೆ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿ.ಐ.ಡಿ. ತನಿಖೆಯಲ್ಲೂ ಯಾವುದೇ ರೀತಿಯ ಪ್ರಗತಿ ಕಾಣುತ್ತಿಲ್ಲ. ಸಿ.ಐ.ಡಿ. ತನಿಖೆಯ ಪ್ರಗತಿಯ ಕಡೆ ರಾಜ್ಯ ಸರಕಾರದ ಪ್ರತಿನಿಧಿಯಾದ ಶಾಸಕರು ಕೂಡಾ ಗಮನ ಹರಿಸುತ್ತಿಲ್ಲ.
ಜೋಡಿ ಕೊಲೆ ನಡೆದ ಸಂದರ್ಭ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರವಿತ್ತು. ಆ ಸಂದರ್ಭ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಚುನಾವಣೆ ದೃಷ್ಟಿಕೋನವನ್ನಿರಿಸಿ ಈಗಿನ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ಕೂಡ ಮಾಡಿತ್ತು. ಶಾಸಕರು ಚುನಾವಣಾ ಪ್ರಚಾರ ಸಂದರ್ಭ ಪಂಜಿಮೊಗರು ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಆಶ್ವಾಸನೆೆ ನೀಡಿ ಗೆದ್ದ ನಂತರ ಎಲ್ಲವನ್ನೂ ಮರೆತಿರುವ ಹಾಗಿದೆ. ಪಂಜಿಮೊಗರಿಗೆ ಭೇಟಿ ನೀಡುವ ಸಂದರ್ಭ ಪ್ರಶ್ನಿಸಿದಾಗ ನುಣುಚಿಕೊಳ್ಳುವ, ಬೇಜವಾಬ್ದಾರಿ ಉತ್ತರ ನೀಡುವ ಶಾಸಕರು ಮುಗ್ಧ ಜೀವಗಳು ಬಲಿಯಾಗಿರುವುದನ್ನೇ ಮರೆತಂತಿದೆ. ಇನ್ನು ಜಿಲ್ಲೆಯಲ್ಲಿನ ಇತರ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತಮ್ಮದೇ ರಾಜ್ಯ ಸರಕಾರವಿದ್ದರೂ ಸಿ.ಐ.ಡಿ ತನಿಖೆಯ ಪ್ರಗತಿಯನ್ನೂ ಪರಿಶೀಲಿಸದ ಜಿಲ್ಲಾ ಉಸ್ತುವಾರಿ ಮಂತ್ರಿಯವರು, ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಇದ್ದರೂ ಈ ಪ್ರಕರಣದಲ್ಲಿ ನ್ಯಾಯ ಸಿಗಲಿಲ್ಲ.
ಜಿಲ್ಲೆಯ ಹಲವಾರು ಪ್ರಕರಣಗಳು ಸಿ.ಐ.ಡಿ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗುತ್ತಿರುವ ಸಿ.ಐ.ಡಿ ಮೇಲಿನ ನಂಬಿಕೆಯನ್ನು ಜನತೆ ಕಳೆದುಕೊಳ್ಳುವಂತಾಗಿದೆ. ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ವೈಫಲ್ಯ ಕಂಡಿರುವ ಸಿ.ಐ.ಡಿ. ತನಿಖೆಯನ್ನು ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆಗೆ ನಮ್ಮ ಬೇಡಿಕೆಯಾಗಿದೆ. ಪಂಜಿಮೊಗರಿನ ತಮ್ಮದೇ ಸಮುದಾಯದ ತಾಯಿ ಮಗುವಿನ ಎರಡು ಮುಗ್ಧ ಜೀವಗಳ ಕೊಲೆ ಪ್ರಕರಣವನ್ನು ಶಾಸಕರು ಇನ್ನಾದರೂ ಗಮನಹರಿಸಬೇಕಾಗಿದೆ. ಪವಿತ್ರ ರಮಝಾನ್ ತಿಂಗಳ ಈ ಸಂದರ್ಭದಲ್ಲಾದರೂ ಈ ಪ್ರಕರಣಕ್ಕೆ ನ್ಯಾಯ ಒದಗಿಸಿ.
-ನಾಗರಿಕರು
ಪಂಜಿಮೊಗರು





