ಇಂಗ್ಲೆಂಡ್ ಫುಟ್ಬಾಲ್ ಕೋಚ್ ರಾಯ್ ಹಾಗ್ಸನ್ ರಾಜೀನಾಮೆ
ನೈಸ್, ಜೂ.28: ಇಂಗ್ಲೆಂಡ್ ಫುಟ್ಬಾಲ್ ಕೋಚ್ ರಾಯ್ ಹಾಗ್ಸನ್ ಅವರ ನಾಲ್ಕು ವರ್ಷಗಳ ಅಧಿಕಾರದ ಅವಧಿ ದುಃಖಾಂತ್ಯಗೊಂಡಿದೆ. ಸೋಮವಾರ ಯುರೋ ಕಪ್‌ನ ಅಂತಿಮ-16ರ ಸುತ್ತಿನಲ್ಲಿ ಇಂಗ್ಲೆಂಡ್ ತಂಡ ಐಸ್‌ಲ್ಯಾಂಡ್ ವಿರುದ್ಧ ಸೋತ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಯ್ ರಾಜೀನಾಮೆ ಸಲ್ಲಿಸಿದ್ದಾರೆ.
68ರ ಹರೆಯದ ಹಾಗ್ಸನ್ ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾನು ಸಿದ್ಧಪಡಿಸಿಕೊಂಡು ಬಂದಿದ್ದ ಹೇಳಿಕೆಯನ್ನು ಓದಿದರು.
‘‘ಇದೀಗ ನಾವು ಯುರೋಕಪ್‌ನಿಂದ ಹೊರ ನಡೆದಿದ್ದೇವೆ. ಅತ್ಯಂತ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶನ ನೀಡಲು ಸೂಕ್ತ ಮಾರ್ಗದರ್ಶಕರ ಅಗತ್ಯವಿದೆ. ನನ್ನ ಒಪ್ಪಂದ ಅವಧಿ ಯುರೋ ಟೂರ್ನಿಯ ತನಕವಿತ್ತು. ಇನ್ನೂ ಎರಡು ವರ್ಷ ತಂಡದೊಂದಿಗೆ ಇರುವ ಬಯಕೆಯಿತ್ತು. ಆದರೆ, ಇದೀಗ ಬೇರೆಯವರು ನನ್ನ ಹುದ್ದೆಯನ್ನು ನಿಭಾಯಿಸುವ ಸಮಯ ಬಂದಿದೆ’’ ಎಂದು ನಾಲ್ಕು ವರ್ಷಗಳ ಹಿಂದೆ ಇಟಲಿಯ ಫ್ಯಾಬಿಯೊ ಕಪೆಲ್ಲೊರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಹಾಗ್ಸನ್ ಹೇಳಿದ್ದಾರೆ.
ಹಾಗ್ಸನ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ 2016ರ ಯುರೋ ಅರ್ಹತಾ ಸುತ್ತಿನ ಪಂದ್ಯದಲ್ಲಿ ಎಲ್ಲ 10 ಪಂದ್ಯಗಳನ್ನು ಜಯಿಸಿತ್ತು. ಆದರೆ, ಪ್ರಮುಖ ಟೂರ್ನಿಗಳಲ್ಲಿ 11 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಜಯ ಸಾಧಿಸಿತ್ತು. ಇಂಗ್ಲೆಂಡ್ 2012ರ ಯುರೋ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿಗೆ ಶರಣಾಗಿತ್ತು. 2014ರ ವಿಶ್ವಕಪ್‌ನಲ್ಲಿ ಒಂದೂ ಪಂದ್ಯವನ್ನು ಗೆಲ್ಲದೆಯೇ ಗ್ರೂಪ್ ಹಂತದಲ್ಲೇ ಹೊರ ನಡೆದಿತ್ತು.





