ಮರಡೋನಾ ಸಾಧನೆ ಸರಿಗಟ್ಟಲು ಮೆಸ್ಸಿ ವಿಫಲ

ಬ್ಯುನಸ್‌ಐರಿಸ್, ಜೂ.28: ಅರ್ಜೆಂಟೀನದ ಡಿಯಾಗೊ ಮರಡೋನಾ ಹಾಗೂ ಲಿಯೊನೆಲ್ ಮೆಸ್ಸಿ ತನ್ನ ಚಾಕಚಕ್ಯತೆಯ ಆಟದ ಮೂಲಕ ವಿಶ್ವ ಫುಟ್ಬಾಲ್ ರಂಗದಲ್ಲ್ಲಿ ತನ್ನದೇ ಛಾಪು ಮೂಡಿಸಿದ್ದರು. ಮರಡೋನಾ ವಿಶ್ವಕಪ್‌ನ್ನು ಜಯಿಸಿ ಎತ್ತರದ ಸ್ಥಾನಕ್ಕೇರಿದರೆ, ಮೆಸ್ಸಿ 2008ರಲ್ಲಿ ಒಲಿಂಪಿಕ್ಸ್ ಪದಕ ಜಯಿಸಿದ್ದು ಹೊರತುಪಡಿಸಿದರೆ ಬೇರ್ಯಾವ ಪ್ರಮುಖ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ.
ಮರಡೋನಾರ ಸಾಧನೆಯನ್ನು ಸರಿಗಟ್ಟಲು ಮೆಸ್ಸಿಗೆ ಸಾಧ್ಯವಾಗಲೇ ಇಲ್ಲ. ಮೆಸ್ಸಿ ಕ್ಲಬ್ ಮಟ್ಟದಲ್ಲಿ ಸ್ಪೇನ್‌ನ ದೈತ್ಯ ತಂಡ ಬಾರ್ಸಿಲೋನದ ಪರ ನಾಲ್ಕು ಚಾಂಪಿಯನ್‌ಶಿಪ್ ಲೀಗ್‌ಗಳನ್ನು ಜಯಿಸಿದ್ದರು.
ಅರ್ಜೆಂಟೀನ ಅಮೆರಿಕದಲ್ಲಿ ರವಿವಾರ ನಡೆದ ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಚಿಲಿಯ ವಿರುದ್ಧ ಸೋತಿತ್ತು. ಮೆಸ್ಸಿ ಅರ್ಜೆಂಟೀನದ ಪರ ಆಡಿದ್ದ ನಾಲ್ಕನೆ ಫೈನಲ್ ಪಂದ್ಯ ಅದಾಗಿತ್ತು. ನಾಲ್ಕರಲ್ಲೂ ಮೆಸ್ಸಿಯ ಮ್ಯಾಜಿಕ್ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ರವಿವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು.
ಅರ್ಜೆಂಟೀನದ ಅಭಿಮಾನಿಗಳು ಮೆಸ್ಸಿಯನ್ನು ನಾಯಕತ್ವದಿಂದ ಬದಲಿಸಬೇಕೆಂದು ಬಯಸುತ್ತಿದ್ದರು. ಪ್ರತಿ ಬಾರಿ ಅರ್ಜೆಂಟೀನ ಸೋತಾಗ ಮೆಸ್ಸಿ ಒತ್ತಡಕ್ಕೆ ಸಿಲುಕುವುದು ಅಭಿಮಾನಿಗಳಿಗೆ ಇಷ್ಟವಾಗುತ್ತಿರಲಿಲ್ಲ.
ಹಾಗೇ ನೋಡಿದರೆ ಅರ್ಜೆಂಟೀನ 1995ರ ಬಳಿಕ ಏಳು ಪ್ರಮುಖ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದೆ. ಮೂರು ಬಾರಿ ಸಾಂಪ್ರದಾಯಿಕ ಎದುರಾಳಿ ಬ್ರೆಝಿಲ್ ವಿರುದ್ಧ ಸೋತಿದೆ.
2005ರಲ್ಲಿ ಮೆಸ್ಸಿ ಚೊಚ್ಚಲ ಪಂದ್ಯ ಆಡಿದ ನಂತರ ನಾಲ್ಕು ಫೈನಲ್‌ಗಳನ್ನು ಸೋತಿದೆ. ಇದರಲ್ಲಿ 2014ರಲ್ಲಿ ಜರ್ಮನಿ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯವೂ ಸೇರಿದೆ.







