ಕೇಜ್ರಿ ವಿರುದ್ಧದ ಸ್ವಾಮಿ ಪತ್ರ ಗೃಹ ಸಚಿವಾಲಯಕ್ಕೆಕಳುಹಿಸಿದ ರಾಷ್ಟ್ರಪತಿ
ಹೊಸದಿಲ್ಲಿ, ಜೂ.28: ದೆಹಲಿಯಲ್ಲಿ ಕೇಜ್ರಿವಾಲ್ ಸರಕಾರ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಾರ್ಕಿಕ ಹಾಗೂ ದುರುದ್ದೇಶದ ಆಡಳಿತ ನಡೆಸುತ್ತಿದೆ ಎಂದು ಆಪಾದಿಸಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಬರೆದ ಪತ್ರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ.
ದಿಲ್ಲಿಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕುಸಿದಿದೆ ಎಂದು ಸ್ವಾಮಿ ಈ ಪತ್ರದಲ್ಲಿ ಆಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಕೂಡಾ ಕುಚೋದ್ಯದಿಂದ, ಕಾಂಗ್ರೆಸ್ ಸೂಚನೆಯಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೆಟ್ಟ ಕೆಲಸಗಳಿಗೆ ಕೈಜೋಡಿಸುತ್ತಿದ್ದಾರೆ. ಇದೇ ವೇಳೆ ಸಾರ್ವಜನಿಕವಾಗಿ ಆಪ್ ಸರಕಾರವನ್ನು ದೂಷಿಸುತ್ತಿದ್ದಾರೆ ಎಂದು ಸ್ವಾಮಿ ಪತ್ರದಲ್ಲಿ ವಿವರಿಸಿದ್ದರು.
ಸ್ವಾಮಿಯವರ ಪತ್ರವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ ಬಗ್ಗೆ ರಾಷ್ಟ್ರಪತಿ ಕಾರ್ಯಾಲಯ ಅವರಿಗೆ ಮಾಹಿತಿ ನೀಡಿದೆ.





