ಕೋಚ್ ಆಯ್ಕೆ ಪ್ರಕ್ರಿಯೆಗೆ ಸೌರವ್ ಗಂಗುಲಿ ಅಗೌರವ: ರವಿ ಶಾಸ್ತ್ರಿ

ಹೊಸದಿಲ್ಲಿ, ಜೂ.28: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಸಂದರ್ಶನದ ವೇಳೆ ತನ್ನ ಸರದಿ ಬಂದಾಗ ಮಾಜಿ ನಾಯಕ ಸೌರವ್ ಗಂಗುಲಿ ಸಭೆಯಿಂದ ದೂರ ಉಳಿದಿದ್ದರು. ಇದು ಆಯ್ಕೆ ಪ್ರಕ್ರಿಯೆಗೆ ಅವರು ತೋರಿರುವ ‘ಅಗೌರವ’ ಎಂದು ರವಿ ಶಾಸ್ತ್ರಿ ಕಿಡಿಕಾರಿದ್ದಾರೆ
. ಕೋಚ್ ಆಯ್ಕೆಯ ಜವಾಬ್ದಾರಿ ಹೊತ್ತಿದ್ದ ಕ್ರಿಕೆಟ್ ಸಲಹಾ ಸಮಿತಿಯ ಮೂವರು ಸದಸ್ಯರ ಪೈಕಿ ಓರ್ವರಾಗಿದ್ಧ ಗಂಗುಲಿ ಶಾಸ್ತ್ರಿಯ ಸಂದರ್ಶನದ ವೇಳೆ ಸಭೆಯಿಂದ ಹೊರಗೆ ನಡೆದಿದ್ದರು ಎನ್ನಲಾಗಿದೆ.
‘‘ಗಂಗುಲಿಯ ಅಗೌರವಯುತ ನಡವಳಿಕೆಯು ನನಗೆ ಬೇಸರ ತಂದಿದೆ. ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳದಂತೆ ಸಲಹೆ ನೀಡುವೆ. ಸಮಿತಿಯ ಸದಸ್ಯರಾಗಿರುವ ಗಂಗುಲಿ ನನ್ನ ಸಂದರ್ಶನದ ವೇಳೆ ಗೈರು ಹಾಜರಿದ್ದರು. ಇದು ಆಯ್ಕೆ ಪ್ರಕ್ರಿಯೆಗೆ ಅವರು ತೋರ್ಪಡಿಸಿದ ಅಗೌರವ. ಸಂದರ್ಶನಕ್ಕೆ ಹೋದ ಅಭ್ಯರ್ಥಿಯನ್ನು ಗೌರವಿಸದೇ ಇರುವುದು ಸಭ್ಯತೆಯ ಲಕ್ಷಣವಲ್ಲ. ಗಂಗುಲಿ ತನ್ನ ಈ ವರ್ತನೆಯಿಂದ ಸ್ವತಹ ತನ್ನ ಹುದ್ದೆಗೆ ಅಪಚಾರ ಮಾಡಿದ್ದಾರೆ’’ ಎಂದು ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಗೌರವಿಸಿದ ಶಾಸ್ತ್ರಿ, ‘‘ನಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಕಾರಣ ಸಂದರ್ಶನಕ್ಕೆ ಹಾಜರಾಗಿ ತನ್ನ ಕರ್ತವ್ಯ ಮಾಡಿದ್ದೇನೆ. ಆಯ್ಕೆ ಪ್ರಕ್ರಿಯೆ ಬಗ್ಗೆ ನಾನೇನು ಹೇಳಲಾರೆ. 18 ತಿಂಗಳ ಕಾಲ ಟೀಮ್ ಇಂಡಿಯಾದಲ್ಲಿ ನಿರ್ದೇಶಕನಾಗಿದ್ದ ಅವಧಿಯಲ್ಲಿ ಕಠಿಣ ಪರಿಶ್ರಮಪಟ್ಟಿದ್ದೆ. ಕೋಚ್ ಆಗಿ ಮುಂದುವರಿಯಲು ಅವಕಾಶ ನೀಡದೇ ಇರುವುದಕ್ಕೆ ಬೇಸರವಾಗಿದೆ’’ ಎಂದು ಹೇಳಿದರು.
ನೂತನ ಕೋಚ್ ಕುಂಬ್ಳೆ ಅವರನ್ನು ಅಭಿನಂದಿಸಿದ ಶಾಸ್ತ್ರಿ, ‘‘ಅನಿಲ್ ಕುಂಬ್ಳೆ ಭಾರತದ ಶ್ರೇಷ್ಠ ಕ್ರಿಕೆಟಿಗ. ಚೆಂಡು ಕುಂಬ್ಳೆಯ ಅಂಗಳದಲ್ಲಿದೆ. ಅವರಿಗೆ ಉತ್ತಮ ತಂಡ ಲಭಿಸಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಿ ಎಂದರು.







