ಎನ್‌ಐಎ ಅಧಿಕಾರಿಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೆರೆ
ಲಕ್ನೋ,ಜೂ.28: ಎನ್‌ಐಎ ಅಧಿಕಾರಿ ತಂಝಿಲ್ ಅಹ್ಮದ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುನೀರ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ನೊಯ್ಡೆದಲ್ಲಿ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ತಿಳಿಸಿದರು.
ಅಹ್ಮದ್(45) ಈ ವರ್ಷದ ಎಪ್ರಿಲ್ 2ರಂದು ರಾತ್ರಿ ತನ್ನ ಸಂಬಂಧಿಗಳ ಮದುವೆಯಲ್ಲಿ ಪಾಲ್ಗೊಂಡು ಕುಟುಂಬದೊಂದಿಗೆ ಬಿಜ್ನೋರ್ ಜಿಲ್ಲೆಯ ಸಹಸ್ಪುರದ ತನ್ನ ನಿವಾಸಕ್ಕೆ ಮರಳುತ್ತಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಅದನ್ನು ಓವರ್‌ಟೇಕ್ ಮಾಡಿದ್ದು, ಈ ಪೈಕಿ ಮುನೀರ್ ಅಹ್ಮದ್ ಮತ್ತು ಪತ್ನಿ ಫರ್ಝಾನಾ ಅವರ ಮೇಲೆ ಗುಂಡುಗಳ ಸುರಿಮಳೆಗೈದಿದ್ದ 24 ಗುಂಡುಗಳು ದೇಹದಲ್ಲಿ ಹೊಕ್ಕಿದ್ದ ಅಹ್ಮದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಏಮ್ಸ್‌ಗೆ ದಾಖಲಿಸಲ್ಪಟ್ಟಿದ್ದ ಫರ್ಝಾನಾ 10 ದಿನಗಳ ಬಳಿಕ ಸಾವನ್ನಪ್ಪಿದ್ದರು.
ಪ್ರಕರಣದಲ್ಲಿ ರಿಝ್ವನ್, ತಂಝೀಂ,ರೆಹಾನ್ ಮತ್ತು ಝೈನುಲ್ ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು, ಮುನೀರ್ ಬಂಧನದೊಂದಿಗೆ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಅಹ್ಮದ್ ಸಂಬಂಧಿ ರೆಹಾನ್ ಮತ್ತು ಝೈನುಲ್ ಬಂಧನದೊಂದಿಗೆ ಪ್ರಕರಣವನ್ನು ತಾವು ಭೇದಿಸಿದ್ದು, ಕೌಟುಂಬಿಕ ವಿವಾದ ಈ ಹತ್ಯೆಗಳಿಗೆ ಕಾರಣ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೊಂಡಿದ್ದರು.





