ಭದ್ರತಾ ಪಡೆಯಿಂದ ಹಿಝ್ಬುಲ್‌ಉಗ್ರನ ಹತ್ಯೆ ಕಾಶ್ಮೀರದಲ್ಲಿ ಪ್ರತಿಭಟನೆ
ಶ್ರೀನಗರ, ಜೂ.28: ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಹಿಝ್ಬುಲ್ ಉಗ್ರನೊಬ್ಬನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಭದ್ರತಾ ಪಡೆಯ ಕ್ರಮ ಆತನ ಹುಟ್ಟೂರು ಸೋಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ.
ಕುಪ್ವಾರ ಜಿಲ್ಲೆಯ ನಾಗ್ರಿ ಗ್ರಾಮದಲ್ಲಿ ಕೆಲ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಸಮೀರ್ ವಾನಿ ಎಂಬಾತನ ಮನೆಯನ್ನು ಸುತ್ತುವರಿದರು. ಈ ವೇಳೆ ಅಡಗುದಾಣದಿಂದ ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಲಾಯಿತು. ಆಗ ಆರಂಭವಾದ ಗುಂಡಿನ ಚಕಮಕಿಯಲ್ಲಿ ಹಿಝ್ಬುಲ್‌ಮುಜಾಹಿದ್ದೀನ್‌ನ ಉತ್ತರ ಕಾಶ್ಮೀರ ಕಮಾಂಡೆಂಟ್ ವಾನಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ಹೇಳಿವೆ.
ವಾನಿ ಹತ್ಯೆಯ ಸುದ್ದಿ ಸೋಪುರದ ದೂರು ಗ್ರಾಮದಲ್ಲಿ ಹರಡುತ್ತಿದ್ದಂತೆ, ನೂರಾರು ಮಂದಿ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗ್ರಾಮಕ್ಕೆ ಆತನ ಶವ ತಂದ ಸಂದರ್ಭದಲ್ಲಿ ಶಿವ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದರು. ಹಲವು ಮೋಟರ್‌ಸೈಕಲ್‌ಗಳಲ್ಲಿ ರ್ಯಾಲಿ ನಡೆಸಿ ಸಂಘಟನೆಯ ಕಮಾಂಡರ್‌ನ ಅಂತಿಮ ಸಂಸ್ಕಾರದ ಮೆರವಣಿಗೆ ನಡೆಸಲಾಯಿತು. ವಾನಿ ಸಾವಿನ ಹಿನ್ನೆಲೆಯಲ್ಲಿ ಎಲ್ಲ ಮಾರುಕಟ್ಟೆಗಳನ್ನು ಮುಚ್ಚಲಾಯಿತು ಹಾಗೂ ಸಾರ್ವಜನಿಕ ಸಾರಿಗೆ ಸ್ಥಗಿತಗೊಳಿಸಲಾಗಿತ್ತು.





