ಬೆಳ್ತಂಗಡಿ: ಮಳೆಹಾನಿ ಪರಿಹಾರ ಚೆಕ್ ವಿತರಣೆ
ವೇಣೂರು, ಜೂ.28: ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಸರ್ಕಾರ ಮಳೆ ಹಾನಿಗೆ ಪ್ರತೀ ವರ್ಷ ಕೋಟ್ಯಂತರ ರೂ. ವ್ಯಯ ಮಾಡುತ್ತಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವ ಉದ್ದೇಶದಿಂದ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಸಂದರ್ಭದಲ್ಲೂ ರೈತರಿಗಾಗುವ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದು, ಇದು ಸರ್ಕಾರದ ಜವಾಬ್ದಾರಿ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ನಾರಾವಿ ಗ್ರಾಪಂ ಸಭಾಭವ ನದಲ್ಲಿ ಪ್ರಕೃತಿ ವಿಕೋಪದಡಿ ಹಾನಿಯಾದ ಫಲಾನುಭವಿಗಳಿಗೆ ರೂ. 2.42 ಲಕ್ಷ ಪರಿಹಾರ ಮೊತ್ತದ ಚೆಕ್ಕನ್ನು ವಿತರಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ನೀಡಲಾದ 165 ಭರವಸೆಗಳಲ್ಲಿ 100ನ್ನು ಈಗಾಗಲೇ ಪೂರೈಸಲಾಗಿದೆ. ಉಳಿದ ಎರಡು ವರ್ಷದ ಆಡಳಿತದ ಅವಧಿಯಲ್ಲಿ 65 ಭರವಸೆಗಳನ್ನು ಸರ್ಕಾರ ಪೂರೈಸಲಿದೆ ಎಂದು ಅವರು ಹೇಳಿದರು.
ನಾರಾವಿ ಗ್ರಾಪಂ ಅಧ್ಯಕ್ಷ ರವೀಂದ್ರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಶ್ರೀನಿವಾಸ ಕಿಣಿ, ನಾರಾವಿ ತಾಪಂ ಸದಸ್ಯೆ ರೂಪಲತಾ, ನಾರಾವಿ ಗ್ರಾಪಂ ಉಪಾಧ್ಯಕ್ಷೆ ಯಶೋದಾ, ಕಂದಾಯ ಇಲಾಖಾಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ನಿರ್ಮಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು





