ಜಪಾನ್: ಮುಸ್ಲಿಮರ ಮೇಲೆ ನಿಗಾಕ್ಕೆ ಸುಪ್ರೀಂ ಕೋರ್ಟ್ ಅಸ್ತು
ಮುಸ್ಲಿಮರ ಆಕ್ಷೇಪ ತಿರಸ್ಕೃತ

ಟೋಕಿಯೋ, ಜೂ.29 : ಜಪಾನ್ ದೇಶದಲ್ಲಿರುವ ಮುಸ್ಲಿಮ್ ನಾಗರಿಕರ ಮೇಲೆ ಅಲ್ಲಿನ ಸರಕಾರಿ ಏಜನ್ಸಿಗಳು ನಿಗಾ ಇಡುತ್ತಿರುವುದು ಹಾಗೂ ಅವರ ಶಾಲೆಗಳು ಹಾಗೂ ಮಸೀದಿಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿರುವುದನ್ನು ವಿರೋಧಿಸಿ ಅಲ್ಲಿನ 17 ಮುಸ್ಲಿಮ್ ನಾಗರಿಕರು ಸಲ್ಲಿಸಿದ ಅಪೀಲನ್ನು ಜಪಾನಿನ ಸುಪ್ರೀಂ ಕೋರ್ಟ್ ಮೇ 31 ರಂದು ರದ್ದುಪಡಿಸಿದೆ. 2010 ರಲ್ಲಿ ಸೋರಿಕೆಗೊಂಡ 114 ಪೊಲೀಸ್ ದಾಖಲೆಗಳು ಜಪಾನಿನಾದ್ಯಂತವಿರುವ ಕನಿಷ್ಠ 72,000 ಮುಸ್ಲಿಮ್ ನಾಗರಿಕರ ಬಗ್ಗೆ ಮಾಹಿತಿ ನೀಡಿತ್ತಲ್ಲದೆ ಟೋಕಿಯೋದ ಸುತ್ತಮುತ್ತಲಿನ ಪಬ್ಲಿಕ್ ಶಾಲೆಗಳ ಸುಮಾರು 1600 ವಿದ್ಯಾರ್ಥಿಗಳ ಬಗ್ಗೆಯೂ ಮಾಹಿತಿ ಅದರಲ್ಲಿತ್ತು. ಈ ದಾಖಲೆಗಳನ್ನು 20 ದೇಶಗಳಲ್ಲಿ 10,000ಕ್ಕೂ ಅಧಿಕ ಬಾರಿ ಫೈಲ್ ಶೇರಿಂಗ್ ವೆಬ್ ಸೈಟ್ ಮೂಲಕ ಡೌನ್ ಲೋಡ್ ಕೂಡ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡುವ ವೇಳೆ ದೂರುದಾರರ ಪ್ರೈವೆಸಿ ಉಲ್ಲಂಘನೆ ಮಾಡಿದ್ದಕ್ಕೆ 90 ಮಿಲಿಯನ್ ಯೆನ್ (8,80,000 ಡಾಲರ್) ಪರಿಹಾರ ನೀಡಬೇಕೆಂದು ಕೆಳಗಿನ ನ್ಯಾಯಾಲಯ ಆದೇಶಿಸಿರುವುದಕ್ಕೆ ಸಹಮತ ವ್ಯಕ್ತಪಡಿಸಿದೆ. ಆದರೆ ಮುಸ್ಲಿಮರ ಮೇಲೆ ಪೊಲೀಸ್ ನಿಗಾ ಹಾಗೂ ಅವರ ಬಗ್ಗೆ ಮಾಹಿತಿ ಕಲೆ ಹಾಕುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಸುಪ್ರೀಂ ಕೋರ್ಟ್ ಅದನ್ನು ಎತ್ತಿ ಹಿಡಿದು ಅಂತಾರಾಷ್ಟ್ರೀಯ ಉಗ್ರವಾದದ ಬೆದರಿಕೆಯ ವಿರುದ್ಧ ಎಚ್ಚರಿಕೆಯಿಂದಿರಲು ಇಂತಹ ಕ್ರಮ `ಅಗತ್ಯ ಹಾಗೂ ಅನಿವಾರ್ಯ' ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪು ದೇಶದಲ್ಲಿ ಅಷ್ಟೊಂದೇನೂ ಸುದ್ದಿ ಮಾಡಿಲ್ಲ ಹಾಗೂ ಸಾರ್ವಜನಿಕ ಚರ್ಚೆಗೂ ಆಸ್ಪದ ನೀಡಿಲ್ಲ. ಸ್ಥಳೀಯ ಸುದ್ದಿ ಮಾಧ್ಯಮಗಳು ಕೋರ್ಟ್ ವಿಚಾರಣೆಯ ವಿಚಾರದ ಬಗ್ಗೆ ಕೆಲ ಸುದ್ದಿಗಳನ್ನು ಪ್ರಕಟಿಸಿ ಪೊಲೀಸ್ ನಿಗಾದ ಬಗ್ಗೆಯೂ ಬರೆದಿವೆ.
ಈ ತೀರ್ಪಿನ ನಂತರ ದೇಶದಲ್ಲಿ ಮುಸ್ಲಿಮರ ಮೇಲಿನ ನಿಗಾ ಮತ್ತಷ್ಟು ಹೆಚ್ಚಿದೆಯೆಂದು ಸ್ವತಹ ಮುಸ್ಲಿಮರಾಗಿರುವ ದೂರುದಾರರ ವಕೀಲೆ ಜುಂಕೋ ಹಯಶಿ ಹೇಳುತ್ತಾರೆ.





