ನಗರದಲ್ಲಿ ಕುದ್ಮುಲ್ ರಂಗರಾವ್ ಹೆಸರಿನಲ್ಲಿ ಶಾಶ್ವತ ಸ್ಮಾರಕ: ಹರಿನಾಥ್

ಮಂಗಳೂರು,ಜೂ.29: ಸಮಾಜದ ತಳವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದ ಸಮಾಜ ಸುಧಾರಕ ಕುದ್ಮುಲ್ ರಂಗರಾವ್‌ರವರ ಹೆಸರಿನಲ್ಲಿ ನಗರದಲ್ಲಿ ಶಾಶ್ವತ ಸ್ಮಾರಕವನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗುವುದು ಎಂದು ಮೇಯರ್ ಹರಿನಾಥ್ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ದಲಿತೋದ್ಧಾರಕ ಕುದ್ಮುಲ್ ರಂಗರಾವ್‌ರವರ 157ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸದ್ಯ ನಗರದ ರಸ್ತೆಯೊಂದಕ್ಕೆ ಮಾತ್ರವೇ ಕುದ್ಮುಲ್ ರಂಗರಾವ್‌ರವರ ಹೆಸರಿದ್ದು, ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ ನಗರದಲ್ಲಿ ಶಾಶ್ವತ ಸ್ಮಾರಕ ನಿರ್ಮಾಣವಾಗಬೇಕಿದೆ. ಅದು ಯಾವ ರೀತಿಯ ಸ್ಮಾರಕ ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಂಗಳೂರು ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಿವೃತ್ತ ಸಾರಿಗೆ ಅಧಿಕಾರಿ ಡಾ. ಮುಗಲವಳ್ಳಿ ಕೇಶವ ಧರಣಿ ಕುದ್ಮುಲ್ ರಂಗರಾವ್‌ರವರ ಕೊಡುಗೆ, ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸಾರಸ್ಮತ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಕುದ್ಮುಲ್ ರಂಗರಾವ್‌ರವರು ದಕ್ಷಿಣ ಕನ್ನಡ ಮಾತ್ರವಲ್ಲದೇ ಭಾರತದ ದಲಿತ ಸಮುದಾಯಕ್ಕೆ ಆತ್ಮ ಗೌರವ ಹಾಗೂ ಸ್ವಾಭಿಮಾನದ ಬದುಕು ನೀಡಿದವರು ಎಂದು ಬಣ್ಣಿಸಿದ ಧರಣಿ, ದಲಿತ ಸಮುದಾಯದ ಇತಿಹಾಸವನ್ನೇ ಬದಲಿಸಿದ ಧೀಮಂತ ವ್ಯಕ್ತಿ ಕುದ್ಮುಲ್ ರಂಗರಾಯರಾಗಿದ್ದಾರೆ ಎಂದರು.
ದಲಿತರಿಗೆ ಸ್ವಾಭಿಮಾನದ ಬದುಕಿನ ಜತೆಗೆ, ವಿಧವೆಯರಿಗೆ ಮರು ವಿವಾಹಕ್ಕೆ ಉತ್ತೇಜನದಂತಹ ಕ್ರಾಂತಿಕಾರಿ ಬದಲಾವಣೆಗೆ ಕುದ್ಮುಲ್ ರಂಗರಾವ್ ಶ್ರಮಿಸಿದವರು. ಅವರ ಉದಾತ್ತ ಧ್ಯೇಯಗಳ ಮೂಲಕ ಮತ್ತೆ ಭಾರತವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಕೇಶವ ಧರಣಿ ಹೇಳಿದರು.
ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.
ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸಂತೋಷ್ ಕುಮಾರ್, ಜಿ.ಪಂ.ನ ಹಿರಿಯ ಅಧಿಕಾರಿ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.
ದಲಿತ ಸಮುದಾಯದ ಪರಿವರ್ತನೆಯ ಹರಿಕಾರ ಕುದ್ಮುಲ್ ರಂಗರಾವ್
ಒಂದು ಶತಮಾನದ ಹಿಂದೆಯೇ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರು ಹುಟ್ಟುವುದಕ್ಕೂ ಮೊದಲು ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ರಂಗರಾವ್, ದಲಿತರ ಕೇರಿಗಳಿಗೆ ತೆರಳಿ ಪರಿವರ್ತನೆಗೆ ಮುನ್ನುಡಿ ಹಾಕಿದವರು. ದಲಿತರ ಪರ ಅಭಿವೃದ್ಧಿ ಕಾರ್ಯಗಳಿಗೆ ಮುಂದಾದಾಗ ತಮ್ಮ ಸಮುದಾಯದಿಂದಲೇ ಎದುರಾದ ಸವಾಲುಗಳು, ಬಹಿಷ್ಕಾರವನ್ನೂ ಲೆಕ್ಕಿಸದೆ, ‘‘ನನ್ನ ಊರಿನ ದಲಿತ ಹುಡುಗನೊಬ್ಬ ಶಿಕ್ಷಣ ಪಡೆದು ಆತ ಕಾರಿನಲ್ಲಿ ಈ ರಸ್ತೆಯಲ್ಲಿ ಓಡಾಡುವಾಗ ಆ ಕಾರಿನ ಧೂಳು ನನ್ನ ತಲೆಗೆ ತಾಗಿದಾಗ ನನ್ನ ಜೀವನ ಸಾರ್ಥಕವಾಗುವುದು’’ ಎಂಬ ಅದ್ಭುತವಾದ ಮಾತನ್ನು ನುಡಿದಿದ್ದ ರಂಗರಾವ್‌ರವರು ತಮ್ಮ ಮಾತನ್ನು ದೃಢಪಡಿಸಲು ಆ ಸಮಯದಲ್ಲೇ ದಲಿತರ ಶಿಕ್ಷಣದ ಉದ್ದೇಶದಿಂದಲೇ 20 ಶಾಲೆಗಳನ್ನು ತೆರೆಯುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಶಾಲೆಗಳಿಗೆ ತಮ್ಮ ಸಮುದಾಯದ ಶಿಕ್ಷಕರು ಪಾಠ ಕಲಿಸಲು ಹಿಂದೇಟು ಹಾಕಿದಾಗ, ಕ್ರೈಸ್ತ ಸಮುದಾಯದ ಶಿಕ್ಷಕರನ್ನು ನೇಮಕ ಮಾಡಿ ಅವರಿಂದ ದಲಿತ ಸಮುದಾಯಕ್ಕೆ ಶಿಕ್ಷಣ ಒದಗಿಸುವ ಮೂಲಕ ಕ್ರಾಂತಿ ಮಾಡಿದವರು ಕುದ್ಮುಲ್ ರಂಗರಾವ್‌ರವರು ಎಂದು ಡಾ. ಮುಗಲವಳ್ಳಿ ಕೇಶವ ಧರಣಿ ವಿಶ್ಲೇಷಣೆ ಮಾಡಿದ್ದಾರೆ.







