ಐಸಿಸಿ ಕ್ರಿಕೆಟ್ ಸಮಿತಿಗೆ ಸೌರವ್ ಗಂಗುಲಿ ಪ್ರಬಲ ಆಕಾಂಕ್ಷಿ?

ಮುಂಬೈ, ಜೂ.29: ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಗೆ ಅನಿಲ್ ಕುಂಬ್ಳೆ ಬದಲಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಪ್ರಬಲ ಸ್ಪರ್ಧೆಯಾಗಿದ್ದಾರೆ ಎನ್ನಲಾಗಿದೆ.
ಇದೀಗ ಎಡಿನ್‌ಬರ್ಗ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಕ್ರಿಕೆಟ್ ಸಮಿತಿಗೆ ಕುಂಬ್ಳೆಯ ಬದಲಿಗೆ ಬೇರೆ ಅಭ್ಯರ್ಥಿಯ ಆಯ್ಕೆಯ ಸಂಬಂಧ ಚರ್ಚೆ ನಡೆದಿದೆ. ಆದರೆ, ಶೀಘ್ರವೇ ಕುಂಬ್ಳೆಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ.
ಇತ್ತೀಚೆಗೆ ಧರ್ಮಶಾಲಾದಲ್ಲಿ ನಡೆದ ಬಿಸಿಸಿಐ ಸಭೆೆಯಲ್ಲಿ ಗಂಗುಲಿ ಅವರನ್ನು ಕುಂಬ್ಳೆ ಸ್ಥಾನಕ್ಕೆ ಶಿಫಾರಸು ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಗಂಗುಲಿ ಕೂಡ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಕುಂಬ್ಳೆ ಅವರನ್ನು ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರನ್ನಾಗಿ ಮುಂದುವರಿಸಲಾಗಿದೆ. ಆದರೆ, ಅವರು ಇತ್ತೀಚೆಗೆ ಟೀಮ್ ಇಂಡಿಯಾದ ಪ್ರಮುಖ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಈಗ ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ. ಕುಂಬ್ಳೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.





