ದೇರಳಕಟ್ಟೆ: ಯೆನೆಪೊಯ ವಿವಿಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕೊಣಾಜೆ, ಜೂ.29: ಭಾರತಕ್ಕೆ ಮಾದಕ ದ್ರವ್ಯದ ಪಿಡುಗಿಗೆ ಮುಖ್ಯ ಕಾರಣ ಭಾರತದ ಸುತ್ತುಮುತ್ತಲಿನ ರಾಷ್ಟ ್ರಗಳಲ್ಲಿ ಡ್ರಗ್ಸ್ ದಂಧೆ ಹೆಚ್ಚುತ್ತಿರುವುದು. ಪ್ರಸ್ತುತ ದಿನಗಳಲ್ಲಿ ಉತ್ತರದ ರಾಜ್ಯ ಮಾತ್ರವಲ್ಲದೆ ದಕ್ಷಿಣದ ಸಣ್ಣಪುಟ್ಟ ರಾಜ್ಯಗಳಲ್ಲಿಯೂ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಅವುಗಳ ಮಧ್ಯದಲ್ಲಿದ್ದು ತಡೆಗಟ್ಟುವುದು ನಮಗೆ ಸವಾಲಾಗಿದೆ ಎಂದು ಮಂಗಳೂರಿನ ಅಬಕಾರಿ ಸುಂಕ ಇಲಾಖೆಯ ಆಯುಕ್ತ ಡಾ. ಎಂ. ಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಣಾಜೆ ನಡುಪದವಿನ ಪಿ.ಎ. ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದ ಒಳಾಂಗಣ ಸಭಾಂಗಣದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಮತ್ತು ಮಾದಕ ದ್ರವ್ಯ ಅಕ್ರಮ ಸಾಗಾಟ ಕುರಿತಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡ್ರಗ್ಸ್ ದಂಧೆ ಕುರಿತಾದ ಹಣೆಪಟ್ಟಿ ಕೇವಲ ಪಂಜಾಬ್ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಡ್ರಗ್ಸ್‌ಗೆ ಬಲಿಯಾದವರು ನಶೆಯಲ್ಲಿ ಹಾರುತ್ತಿದ್ದಾರೆ. ಆದರೆ ಭಾರತದ ಇತರ ರಾಜ್ಯಗಳಲ್ಲಿ ಡ್ರಗ್ಸ್ ಚಟ ಅಂಟಿಸಿಕೊಂಡವರು ಹಾರಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಹಾಗೂ ಕೇರಳ ಕಂದಾಯ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಮಹಾ ನಿರ್ದೇಶಕ ಅಂಜನಿ ಕುಮಾರ್ ಮಾತನಾಡಿ ಕಾನೂನಿಗೆ ವಿರುದ್ಧವಾಗಿರುವ ಒಪಿಎಂ, ಗಾಂಜಾ ದೇಶದ ಹಲವು ಭಾಗದಲ್ಲಿ ಯುವಜನತೆಯನ್ನು ಗುರಿಯಾಗಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಐಷಾರಾಮಿ ಜೀವನ ನಡೆಸಲು, ಓದದೆ ಅಂಕ ಗಳಿಸಲು, ಹಣ ಗಳಿಸುವ ಉದ್ದೇಶದಿಂದ ಶ್ರಮವಿಲ್ಲದೆ ಆರಾಮದಾಯಕ ಜೀವನ ನಡೆಸುವ ಇರಾದೆಯಲ್ಲಿರುವವರು ಇಂತಹ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಯುವಜನತೆ, ವಿದ್ಯಾರ್ಥಿಗಳು ವಿವಿಧ ರೂಪದಲ್ಲಿ ಸಿಗುವ ಸಿಂಥೆಟಿಕ್ ಡ್ರಗ್ಸ್‌ಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ಕಳವಳಕಾರಿ. ಶೈಕ್ಷಣಿಕವಾಗಿ ಮುಂದುವರಿದವರೂ ಮಾದಕದ್ರವ್ಯದ ದಾಸರಾಗುತ್ತಿದ್ದಾರೆ. ಅಂತಹ ಪಿಡುಗನ್ನು ತಡಗಟ್ಟುವುದು ಕೇವಲ ಇನ್‌ವೆಸ್ಟಿಗೇಟಿವ್ ಏಜೆನ್ಸಿಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಆಗತ್ಯ ಎಂದು ನುಡಿದರು.
ಒಬ್ಬ ವಿದ್ಯಾರ್ಥಿ ಅಥವಾ ಉದ್ಯೋಗಿ ಡ್ರಗ್ಸ್‌ಗೆ ಬಲಿಯಾದರೆ ಅದು ಕೇವಲ ಅವನಿಗೆ ಮಾತ್ರ ಬಾಧಿಸುವುದಿಲ್ಲ. ಅವನ ಕುಟುಂಬವನ್ನು ಸರ್ವನಾಶ ಮಾಡುತ್ತದೆ. ಕುಟುಂಬವನ್ನು ಬೀದಿಗೆ ತಳ್ಳುತ್ತದೆ. ಮುಂದಕ್ಕೆ ಸಜಮಾಜಕ್ಕೆ ದೊಡ್ಡ ಕಂಟಕವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸುತ್ತುಮುತ್ತಲಿನ ಪರಿಸರದಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದವರನ್ನು ಗಮನಿಸಿ ಅವರಿಗೆ ಸಂಘ ಸಂಸ್ಥೆಗಳು ಕೌನ್ಸಿಲಿಂಗ್ ಮಾಡುವ ಮೂಲಕ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಯಾಕೆಂದರೆ ಮಾದಕ ದ್ರವ್ಯದ ವಿರುದ್ಧದ ಹೋರಾಟ ಒಂದು ಯುದ್ಧದಂತೆ, ಅದನ್ನು ತಡೆಗಟ್ಟುವಲ್ಲಿ ನಮ್ಮ ಸಮಾಜ, ಕಾನೂನು, ಶಿಕ್ಷಕರು, ವೈದ್ಯರು, ಸಾರ್ವಜನಿಕರು ಸೈನಿಕರಂತೆ ಹೋರಾಟಕ್ಕೆ ಇಳಿಯುವ ಅಗತ್ಯ ಬಹಳಷ್ಟಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಶೆಟ್ಟಿ, ಕೊಣಾಜೆ ನಡುಪದವಿನ ಪಿ.ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಉಪಸ್ಥಿತರಿದ್ದರು.
ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಸಿ.ವಿ. ರಘುವೀರ್ ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯ ವಿವಿಯ ಹೆಚ್ಚುವರಿ ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ವಿಷ್ಣದಾಸ್ ಪ್ರಭು ವಂದಿಸಿದರು.







