ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವೂ ಇದೆ: ಮುಹಮ್ಮದ್ ಮೋನು

ಕೊಣಾಜೆ, ಜೂ.29: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಒಂದು ವಿದ್ಯಾಸಂಸ್ಥೆ ಬೆಳಗಬೇಕಾದರೆ ಕೇವಲ ಆಡಳಿತ ಮಂಡಳಿ, ಅಧ್ಯಾಪಕರು, ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸಾಲದು. ಅದರೊಂದಿಗೆ ಹೆತ್ತವರು ಜಾಗೃತರಾಗಿ ತಮ್ಮ ಮಕ್ಕಳನ್ನೇ ಸಂಪತ್ತನ್ನಾಗಿ ರೂಪಿಸುವ ಜವಬ್ಧಾರಿ ಇದೆ ಎಂದು ಮಂಗಳೂರು ತಾಲೂಕು ಪಂಚಾಯತ್‌ನ ಅಧ್ಯಕ್ಷ ಮುಹಮ್ಮದ್ ಮೋನು ಹೇಳಿದರು.
ಅವರು ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಪೋಷಕರ ಸಭೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಪಜೀರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಪಜೀರುಗುತ್ತು ಭರತ್‌ರಾಜ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಆಯಿಷಾ ಮತ್ತು ಮಧ್ವರಾಜ್ ಶೆಟ್ಟಿ, ಕೋಶಾಧಿಕಾರಿಯಾಗಿ ಪ್ರಭಾವತಿ, ಜೊತೆ ಕೋಶಾಧಿಕಾರಿಯಾಗಿ ಜಾರ್ಜ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ಶ್ರೀಜರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಡಿಸ್ಟಿಂಕ್ಷನ್ ಪಡೆದ ಏಳು ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ ಜಯರಾಮ ಆಳ್ವ ಪೋಡಾರು ನೀಡಿದ ಪ್ರೋತ್ಸಾಹಧನವನ್ನು ಹಸ್ತಾಂತರಿಸಲಾಯಿತು. ಹಾಗೂ ಕಡೆಂಜ ಸೋಮಶೇಖರ್ ಚೌಟ ಹದಿನೈದು ವಿದ್ಯಾರ್ಥಿಗಳಿಗೆ ನೀಡಿದ ಶಾಲಾ ಶುಲ್ಕವನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು. ಅಲ್ಲದೆ ಇದೇ ಸಂದರ್ಭದಲ್ಲಿ ಶಾಲಾ ದತ್ತು ನಿಧಿಯಿಂದ ಎಂಟು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜಯರಾಮ ಆಳ್ವ ಪೋಡಾರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್, ಶಾಲಾ ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ಹರೇಕಳ ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಕೃಷ್ಣಶಾಸ್ತ್ರಿ, ಮೋಹಿನಿ, ಸ್ಮಿತಾ, ಉಷಾಲತಾ, ಕುಮುದಾ, ಸುದರ್ಶನ್, ನೂತನ, ಪ್ರತಿಭಾಸ ಪುರಸ್ಕಾರದ ವಿವರವನ್ನು ವಾಚಿಸಿದರು. ಅಧ್ಯಾಪಕ ರವಿಶಂಕರ್ ಪ್ರಾರ್ಥನೆಗೈದರು. ಅಧ್ಯಾಪಕ ಶಿವಕುಮಾರ್ ವಂದಿಸಿದರು.







