ಮಂಗಳೂರು ಮನಪಾ ಮಾಜಿ ಮೇಯರ್ ಯೂನಿಸ್ ಬ್ರಿಟ್ಟೋ ನಿಧನ

ಮಂಗಳೂರು, ಜೂ.29: ಮಂಗಳೂರು ಮಹಾನಗರಪಾಲಿಕೆಯ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೋ (79) ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಯೂನಿಸ್ ಬ್ರಿಟ್ಟೋ ಅವರು ನಗರದ ಫಳ್ನೀರ್‌ನಲ್ಲಿ ವಾಸವಾಗಿದ್ದರು. ಅವರು 1993-94ರಲ್ಲಿ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಮಂಗಳೂರಿನ ಮೊದಲ ಮಹಿಳಾ ಮೇಯರ್ ಅಗಿದ್ದ ಅವರು ಅದಕ್ಕೂ ಮುಂಚೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಮೊದಲ ಉಪಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
1936 ನವೆಂಬರ್ 27 ಕ್ಕೆ ಜನಿಸಿದ ಯೂನುಸ್ ಬ್ರಿಟ್ಟೋ ಅವರು ಪ್ರಾಥಮಿಕ ಶಿಕ್ಷಣವನ್ನು ಉರ್ವದ ಲೇಡಿಹಿಲ್ ವಿಕ್ಟೋರಿಯಾ ಹೈಸೂಲ್‌ನಲ್ಲಿ, ಪಿಯು ಶಿಕ್ಷಣವನ್ನು ಚಿಕ್ಕಮಗಳೂರು ಸಂತ ಜೋಸೆಫ್ ಕಾನ್ವೆಂಟ್‌ನಲ್ಲಿ, ಬಿಎಸ್ಸಿ ಪದವಿಯನ್ನು ಬೆಂಗಳೂರು ವೌಂಟ್ ಕಾರ್ಮೆಲ್ ನಲ್ಲಿ , ಬಿಎಡ್ ನ್ನು ಮಂಗಳೂರು ಸಂತ ಆಗ್ನೇಸ್‌ನಲ್ಲಿ ಮತ್ತು ಎಂಎಸ್‌ಡಬ್ಲೂವನ್ನು ರೋಶನಿ ನಿಲಯದಲ್ಲಿ ಅಭ್ಯಸಿಸಿದರು. 1973 ರಿಂದ 83 ರವರೆಗೆ ರೋಶನಿ ನಿಲಯದಲ್ಲಿ ಅವರು ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಮಂಗಳೂರು ಮೇಯರ್ ಆಗಿದ್ದ ಸಂದರ್ಭದಲ್ಲಿ ಯೂನಿಸ್ ಬ್ರಿಟ್ಟೋ ಅವರು ಮನಪಾ ವ್ಯಾಪ್ತಿಯ ಸಂಪರ್ಕ ರಸ್ತೆಯನ್ನು ಅಭಿವೃದ್ದಿಪಡಿಸಲು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮನಪಾದಲ್ಲಿ ದೂರು ಮತ್ತು ವಿಚಾರಣೆಗಾಗಿ ಟೋಲ್‌ಪ್ರೀ 106 ಸಂಖ್ಯೆಯನ್ನು ಆರಂಭಿಸಿದ್ದರು. ಡ್ಯಾನಿಡ್ ಯೋಜನೆಯ ನಿಧಿಯ ಸಾಕಾರದಿಂದ ಮೂಲಭೂತ ಸೌಕರ್ಯ, ಒಳಚರಂಡಿ ಕಾಮಗಾರಿಗಳನ್ನು ನಡೆಸಿದ್ದರು. ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಯೂನಿಸ್ ಬ್ರಿಟ್ಟೋ ಅವರು ಹಿರಿಯ ನಾಗರಿಕರ ಸೇವಗಾಗಿ ವಿಶ್ವಾಸ್ ಎಂಬ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.







