ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸೂಚ್ಯಂಕವು 8ಕ್ಕೆ ಏರದಿದ್ದರೆ ಅಭಿವೃದ್ಧಿ ಅಸಾಧ್ಯ: ಜಯವಂತ ನಾಯಕ್

ಮಂಗಳೂರು, ಜೂ.29: ಕೃಷಿ ಕ್ಷೇತ್ರದಲ್ಲಿ ಅಭಿವೃದ್ದಿ ಸೂಚ್ಯಂಕವು ಶೇ.7 ರಿಂದ 8 ತನಕ ಏರಿಕೆಯಾಗದಿದ್ದರೆ ಕೃಷಿಕರು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಜಯವಂತ ನಾಯಕ್ ಹೇಳಿದ್ದಾರೆ.
ಅವರು ಇಂದು ನಗರದ ಕೊಟ್ಟಾರದಲ್ಲಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಭಾರತೀಯ ಸಾಂಖ್ಯಿಕ ಸಂಸ್ಥೆಯ ಸಂಸ್ಥಾಪಕ ಪ್ರಶಾಂತಚಂದ್ರ ಮಹಾಲನೋಬಿಸ್‌ರ 123ನೆ ಜನ್ಮದಿನಾಚರಣೆ ಮತ್ತು 10ನೆ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಕೃಷಿ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಕೃಷಿಕರಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಹಲವು ಯೋಜನೆಗಳ ಪ್ರಯೋಜನವನ್ನು ಪಡೆಯುವ ಬಗ್ಗೆ ರೈತರಿಗೆ ಮಾಹಿತಿಯ ಕೊರತೆ ಇದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವು ಆಗಬೇಕಿದೆ. ದೇಶದಲ್ಲಿ ಪರಿಣಾಮಕಾರಿ ಕೃಷಿ ನೀತಿಯನ್ನು ಅಳವಡಿಸಿದರೆ ಮಾತ್ರ ರೈತರ ಕಲ್ಯಾಣವು ಸಾಧ್ಯವಾಗಲಿದೆ ಎಂದು ಹೇಳಿದರು.
ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ ದೇಶದಲ್ಲಿ ಜಾಗತೀಕರಣ, ಉದಾರಿಕರಣ, ಖಾಸಗೀಕರಣದಿಂದ ದಯನೀಯ ಸ್ಥಿತಿಯಲ್ಲಿದ್ದ ಅಭಿವೃದ್ದಿ ಸೂಚ್ಯಂಕವನ್ನು ಮೇಲೆತ್ತಲು ಪ್ರಯತ್ನಿಸಿದರು. ಅದರಿಂದ ದೇಶದ ಅಭಿವೃದ್ದಿ ಸೂಚ್ಯಂಕ ಶೇ.7 ರಿಂದ 8 ರಷ್ಟು ಹೆಚ್ಚಿದರೂ ದೇಶದಲ್ಲಿನ ಬಡತನ, ನಿರದ್ಯೋಗ ನಿವಾರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ದಿ ಸೂಚ್ಯಂಕ ಏರಿಕೆಯಾಗದಿರುವುದರಿಂದ ಈ ಸಮಸ್ಯೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಪಂಚಾಯತ್‌ನ ಯೋಜನಾ ವೌಲ್ಯ ಮಾಪನ ಅಧಿಕಾರಿ ಸಂಧ್ಯಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ.ಉದಯ್ ಶೆಟ್ಟಿ ಪ್ರಸ್ತಾವನೆಗೈದರು. ಸಹಾಯಕ ನಿರ್ದೇಶಕ ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.







