‘ರವಿ ಶಾಸ್ತ್ರಿ ಮೂರ್ಖರ ಲೋಕದಲ್ಲಿದ್ದಾರೆ’
ಸೌರವ್ ಗಂಗುಲಿ ವಾಗ್ದಾಳಿ

ಹೊಸದಿಲ್ಲಿ, ಜೂ.29: ಭಾರತದ ಪ್ರಮುಖ ಕೋಚ್ ಹುದ್ದೆಯ ಆಯ್ಕೆ ಪ್ರಕ್ರಿಯೆ ವೇಳೆ ಗೈರು ಹಾಜರಾಗಿದ್ದಕ್ಕೆ ತನ್ನನ್ನು ಟೀಕಿಸಿರುವ ರವಿ ಶಾಸ್ತ್ರಿ ಅವರನ್ನು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.
‘‘ನನ್ನಿಂದಾಗಿ ‘ರವಿ ಶಾಸ್ತ್ರಿ ಅವರು ಟೀಮ್ ಇಂಡಿಯಾ ಕೋಚ್ ಆಗಲು ಸಾಧ್ಯವಾಗಿಲ್ಲ ಎಂದು ಯೋಚಿಸಿದ್ದರೆ, ಅವರು ಮೂರ್ಖರ ಜಗತ್ತಿನಲ್ಲಿದ್ದಾರೆಂದು ಹೇಳಬೇಕಾಗುತ್ತದೆ. ರವಿ ನನ್ನ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದು, ನಾನು ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಅವರ ವರ್ತನೆ ನನಗೆ ನೋವುಂಟು ಮಾಡಿದೆ’’ ಎಂದು ಗಂಗುಲಿ ಹೇಳಿದ್ದಾರೆ.
ಗಂಗುಲಿ ಹಾಗೂ ಅವರ ಮಾಜಿ ಸಹ ಆಟಗಾರರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಆಯ್ಕೆ ಸಮಿತಿ ಲೆಗ್ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿತ್ತು. ರವಿ ಶಾಸ್ತ್ರಿ ಸಹಿತ ಇತರ ಅಭ್ಯರ್ಥಿಗಳು ಕೋಚ್‌ಯ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.
ಕೋಚ್ ಆಯ್ಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಶಾಸ್ತ್ರಿ ಸುದ್ದಿವಾಹಿನಿಗೆ ನೀಡಿದ್ದ ಹೇಳಿಕೆಯಲ್ಲಿ ಗಂಗುಲಿ ವಿರುದ್ಧ ಕಿಡಿಕಾರಿದ್ದರು.
‘‘ಗಂಗುಲಿ ತನ್ನ ಸಂದರ್ಶನದ ವೇಳೆ ಗೈರು ಹಾಜರಾಗಿದ್ದರು. ಈ ಮೂಲಕ ಅವರು ಅಗೌರವ ತೋರಿದ್ದಾರೆ. ಇನ್ನು ಮುಂದೆ ಹಾಗೇ ಮಾಡಬಾರದು’’ ಎಂದು ರವಿ ಶಾಸ್ತ್ರಿ ತಾಕೀತು ಮಾಡಿದ್ದರು.
‘‘ಶಾಸ್ತ್ರಿ ಅವರು ಸಂದರ್ಶನಕ್ಕೆ ಖುದ್ದಾಗಿ ಹಾಜರಾಗಬೇಕಾಗಿತ್ತು. ಕೋಚ್ ಆಯ್ಕೆಯ ವೇಳೆ ಅವರು ಬ್ಯಾಂಕಾಂಗ್‌ಗೆ ಪ್ರವಾಸ ಕೈಗೊಳ್ಳಬಾರದಿತ್ತು. ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಹೆಚ್ಚು ಪ್ರಬುದ್ಧತೆ ಪ್ರದರ್ಶಿಸಬೇಕಾಗಿತ್ತು’’ಎಂದು ಗಂಗುಲಿ ಹೇಳಿದ್ದಾರೆ.







