ಪಂಪ್‌ಹೌಸ್‌ಗೆ ಮೆಸ್ಕಾಂ ಅಧಿಕಾರಿಗಳಿಂದ ಹಾನಿ ಆರೋಪ: ಸ್ಥಳೀಯರಿಂದ ಪ್ರತಿಭಟನೆ

ಮೂಡುಬಿದಿರೆ, ಜೂ.29: ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಡೇಲು ಪರಿಸರದಲ್ಲಿ ಬೇಸಿಗೆ ಕಾಲದಲ್ಲಿ ತೀವ್ರ ನೀರಿನ ಅಭಾವವಿದ್ದುದರಿಂದ ನೂತನವಾಗಿ ಕೊರೆದ ಬೋರ್‌ವೆಲ್‌ಗೆ ಅಳವಡಿಸಿದ ಪಂಪ್‌ಹೌಸ್‌ನ್ನು ಮೆಸ್ಕಾಂ ಸಿಬ್ಬಂದಿ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿ ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಕುಕ್ಕುಡೇಲು ಪರಿಸರದಲ್ಲಿ ಎಪ್ರಿಲ್‌ನಲ್ಲಿ ಬೋರ್‌ವೆಲ್ ಕೊರೆದಿದ್ದು ಪಂಚಾಯತ್‌ಗೆ ಹಣ ಉಳಿತಾಯಕ್ಕಾಗಿ ನಿರುಪಯುಕ್ತ ಬೋರ್‌ವೆಲ್‌ನ ಪಂಪ್ ಹೌಸ್‌ನ್ನು ಇಲ್ಲಿ ಅಳವಡಿಸಲಾಗಿತ್ತು.
ಕಳೆದ ಒಂದೂವರೆ ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಲ್ಪಿಸದ ಮೆಸ್ಕಾಂ ಇಲಾಖೆ ಈಗ ಪಂಪ್ ಹೌಸ್‌ನ್ನು ಸ್ಥಳಾಂತರಿಸಬೇಕೆಂದು ಹೇಳಿ ಅದನ್ನು ಸಿಬ್ಬಂದಿ ಮೂಲಕ ದೂಡಿ ಹಾಕಿ ಹಾನಿಗೊಳಿಸಿದೆ. ಮೆಸ್ಕಾಂ ನಿಯಮಗಳ ಪ್ರಕಾರ ನಿರ್ಮಿಸಿದ ಈ ಪಂಪ್ ಹೌಸ್‌ಗೆ ಸ್ಥಳೀಯರಿಂದಾಗಲೀ, ಮೆಸ್ಕಾಂನಿಂದಾಗಲೀ ಪಂಚಾಯತ್‌ಗೆ ಯಾವುದೇ ಲಿಖಿತ ಆಕ್ಷೇಪ ಬಂದಿರಲಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸುವ ಬದಲು ಅದನ್ನು ದೂಡಿ ಹಾಕಿರುವುದು ಖಂಡನಾರ್ಹ ಎಂದು ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.
ಮೂಡುಬಿದಿರೆ ಮೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಸತೀಶ್‌ಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿ ಪಂಪ್ ಹೌಸ್‌ನ್ನು ಸ್ಥಳಾಂತರಿಸಲು ವೌಖಿಕವಾಗಿ ಪಂಚಾಯತ್‌ಗೆ ತಿಳಿಸಿದ್ದೆವು. ಅವರು ಸ್ಥಳಾಂತರಿಸದಿರುವುದರಿಂದ ನಾವು ಸ್ಥಳಾಂತರಿಸುವ ವೇಳೆ ಪಂಪ್‌ಹೌಸ್ ಪಲ್ಟಿಯಾಗಿದೆ. ಅದನ್ನು ಯಥಾಸ್ಥಿತಿಯಲ್ಲಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದಾರೆ.







