ಕಾರ್ಕಳ: ಬಾರಾಡಿಯ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಕಾರ್ಕಳ, ಜೂ.29: ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬಾರಾಡಿಯಲ್ಲಿ ಜೂ.23ರಂದು ಸಾವನ್ನಪ್ಪಿದ್ದ ಗೀತಾ(25)ರ ಸಾವು ಆತ್ಮಹತ್ಯೆ ಅಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂ.23ರಂದು ಮಧ್ಯಾಹ್ನದ ವೇಳೆ ಸಂಶಯಾಸ್ಪದ ರೀತಿಯಲ್ಲಿ ಗೀತಾ ಸಾವನ್ನಪ್ಪಿದ್ದರು. ಗೀತಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಗೀತಾಳ ತವರು ಮನೆಯವರು ಇದೊಂದು ಕೊಲೆ ಎಂದು ಆರೋಪಿಸಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಗ್ರಾಮಾಂತರ ಪೊಲೀಸರು ನಡೆಸಿದ ವಿಚಾರಣೆ ಹಾಗೂ ಗೀತಾಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಕೊಲೆ ಎನ್ನುವ ವಿಚಾರ ಬಹಿರಂಗಗೊಂಡಿದೆ ಎನ್ನಲಾಗಿದೆ.
ಘಟನೆ ವಿವರ
ಬಾರಾಡಿ ನಿವಾಸಿ ಹರೀಶ್ ಪಾಣಾರ(29) ಎಂಬಾತ ಕಳೆದ ಐದು ವರ್ಷಗಳ ಹಿಂದೆ ಮೂಡುಬೆಳ್ಳೆಯ ನಿವಾಸಿ ಗೀತಾರನ್ನು ಪ್ರೇಮ ವಿವಾಹವಾಗಿದ್ದ. ಆರಂಭದಲ್ಲಿ ಪತಿ-ಪತ್ನಿಯು ಹೊಂದಾಣಿಕೆಯಿಂದಿದ್ದು, ಬಳಿಕ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದು, ಇವರಿಬ್ಬರ ದಾಂಪತ್ಯದಲ್ಲಿ ವಿರಸ ಕಂಡಿತ್ತು ಎನ್ನಲಾಗಿದೆ. ಗೀತಾ ತನ್ನ ಪತಿ ನೀಡುತ್ತಿದ್ದ ಹಿಂಸೆಯ ವಿರುದ್ಧ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದು, ಹರೀಶನನ್ನು ಕರೆದು ಎರಡು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಗೀತಾ ತನ್ನ ತವರು ಮನೆ ಮೂಡುಬೆಳ್ಳೆಗೆ ಹೋಗಿದ್ದು, ಜೂ.23ರಂದು ಹರೀಶ ಆಕೆಗೆ ಪೋನಾಯಿಸಿ ಇಂದೇ ತವರು ಮನೆಗೆ ವಾಪಸ್ಸಾಗುವಂತೆ ಒತ್ತಾಯಿಸಿದ್ದ. ಅಂದು ತವರು ಮನೆಯಿಂದ ಗೀತಾ ಪತಿಯ ಮನೆಗಾಗಮಿಸಿದ್ದರು. ಗೀತಾ ತವರು ಮನೆಗೆ ಹೋಗಿ ನಾಲ್ಕೈದು ದಿನಗಳಿಂದ ಬಂದಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಕುಪಿತನಾದ ಆರೋಪಿ ಹರೀಶ್ ಅಂದೇ ಮಧ್ಯಾಹ್ನದ ವೇಳೆ ಕಪ್ಪುದಾರ(ಪಟ್ಟೆ ನೂಲು)ದಿಂದ ಗೀತಾಳ ಕುತ್ತಿಗೆಯನ್ನು ಬಿಗಿದು ಕೊಂದಿದ್ದಾನೆ ಎಂದು ಹೇಳಲಾಗಿದೆ.
ಬಳಿಕ ಯಾರಿಗೂ ತಿಳಿಯಬಾರದೆಂದು ಮನೆಯ ಮುಂಭಾಗದಲ್ಲಿ ಬಟ್ಟೆ ಒಣಗಿಸಲು ಹಾಕಿದ್ದ ನೈಲಾನ್ ಹಗ್ಗದಿಂದ ಆಕೆಯ ಕುತ್ತಿಗೆಗೆ ನೇಣು ಬಿಗಿದು ಹತ್ತಿರದಲ್ಲೇ ಉಷಾ ಎಂಬವರಿಗೆ ಸೇರಿದ ರಾಜೀವ ಗಾಂಧಿ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಯೊಳಗಿರುವ ಜಂತಿಗೆ ನೇತು ಹಾಕಿದ್ದ. ಬಳಿಕ ತಾನೇ ನೇಣಿನ ಕುಣಿಕೆಯಿಂದ ಆಕೆಯ ಶವವನ್ನು ಬಿಚ್ಚಿ, ಆಕೆಯನ್ನು ನೆಲದಲ್ಲಿ ಮಲಗಿಸಿ, ನೇಣಿಗೆ ಬಳಸಿದ ಹಗ್ಗವನ್ನು ಹರಿಯುವ ನೀರಿನಲ್ಲಿ ಬಿಟ್ಟು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದ ಎಂಬುದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.







