ಮಾಲ್, ಚಿತ್ರಮಂದಿರಗಳು 24 ತಾಸುಗಳ ಕಾಲವೂ ಕಾರ್ಯಾಚರಿಸಲು ಕೇಂದ್ರ ಸಂಪುಟ ಅಸ್ತು

ಹೊಸದಿಲ್ಲಿ,ಜೂ.29: ಅಂಗಡಿ, ಮಾಲ್‌ಗಳು ಹಾಗೂ ಚಿತ್ರಮಂದಿರಗಳು ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯಾಚರಿಸುವುದಕ್ಕೆ ಅವಕಾಶ ನೀಡುವ ಮಾದರಿ ಕಾನೂನೊಂದಕ್ಕೆ ಕೇಂದ್ರ ಸಂಪುಟವು ಬುಧವಾರ ತನ್ನ ಅನುಮೋದನೆಯನ್ನು ನೀಡಿದೆ.
ಉತ್ಪಾದನಾ ಘಟಕಗಳನ್ನು ಹೊರತುಪಡಿಸಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆಗಳ ಕಾರ್ಯನಿರ್ವಹಣೆಯ ಸಮಯಗಳಲ್ಲಿ ಬದಲಾವಣೆಗಳನ್ನು ಮಾಡಲು ಸಹ ಈ ವಿಧೇಯಕವು ಅವಕಾಶ ಒದಗಿಸುತ್ತದೆ.
ಅಂಗಡಿ ಹಾಗೂ ಸಂಸ್ಥಾಪನೆಗಳ ( ಉದ್ಯೋಗ ನಿಯಂತ್ರಣ ಹಾಗೂ ಸೇವೆಗಳ ಸ್ಥಿತಿ ನಿಯಂತ್ರಣ) ವಿಧೇಯಕ 2016ಕ್ಕೆ ಸಂಪುಟವು ತನ್ನ ಅನುಮೋದನೆಯನ್ನು ನೀಡಿದೆ ಎಂದು ಮೂಲವೊಂದು ತಿಳಿಸಿದೆ.ಈ ಕಾನೂನು ಜಾರಿಗೊಳ್ಳಲು ಸಂಸತ್‌ನ ಅನುಮತಿಯ ಅಗತ್ಯವಿರುವುದಿಲ್ಲ.
ನೂತನ ಕಾನೂನಿನಿಂದಾಗಿ ಅಂಗಡಿ ಹಾಗೂ ವಾಣಿಜ್ಯ ಸಂಸ್ಥಾಪನೆಗಗಳು ಅಧಿಕ ತಾಸುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿರುವುದರಿಂದ ಅಪಾರ ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಲಿವೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಕಾರ್ಮಿಕ ಸಚಿವಾಲಯ ರೂಪಿಸಿರುವ ಈ ಕಾನೂನನ್ನು ರಾಜ್ಯಗಳು ತಮ್ಮಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಹಾಗೂ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅವು ಅದನ್ನು ಬದಲಾಯಿಸಿಕೊಳ್ಳಬಹುದಾಗಿದೆ.





