ಹೇಳಿದ ಸಮಯಕ್ಕೆ ನಿರ್ಮಾಣ ಪೂರ್ಣಗೊಳಿಸದಿದ್ದರೆ ಬಿಲ್ಡರ್‌ಗಳು ಶೇ. 11 ಬಡ್ಡಿ ತೆರಬೇಕು
ಹೊಸದಿಲ್ಲಿ, ಜೂ.29: ಅಪಾರ್ಟ್‌ಮೆಂಟ್ ಮತ್ತು ಮನೆ ನಿರ್ಮಾಣ ಸಂಸ್ಥೆಗಳು ಹೇಳಿದ ಅವಧಿಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸದಿದ್ದರೆ ಶೇ. 11.2ರಷ್ಟು ಬಡ್ಡಿಯನ್ನು ಗ್ರಾಹಕರಿಗೆ ಪಾವತಿಸಬೇಕು ಎಂದು ಸರಕಾರ ಬಿಡುಗಡೆ ಮಾಡಿರುವ ಕರಡು ನಿಯಮಾವಳಿಯಲ್ಲಿ ಹೇಳಲಾಗಿದೆ. ಸಾಲದ ಹೊಣೆಗಾರಿಕೆ ಹೆಚ್ಚಿದರೂ ಕಟ್ಟಡಗಳು ತಮ್ಮ ಕೈಗೆ ಬಾರದೆ ತೊಂದರೆ ಅನುಭವಿಸುವ ಮನೆ ಖರೀದಿ ಮಾಡುವವರ ಸಮಸ್ಯೆಗೆ ಇದರಿಂದ ಮುಕ್ತಿ ಸಿಗಲಿದೆ ಎಂದು ಹೇಳಲಾಗಿದೆ. ಜನರ ಜತೆಗೆ ಮುಕ್ತಾಯ ಪ್ರಮಾಣಪತ್ರ ಪಡೆಯದ ಯೋಜನೆಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮೂರು ತಿಂಗಳ ಒಳಗಾಗಿ ಸ್ಥಾಪಿಸುವ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದೂ ಹೊಸ ನಿಯಮಾವಳಿ ಸೂಚಿಸುತ್ತದೆ. ನಿಯಮಾವಳಿಯ ಅಧಿಸೂಚನೆ ಹೊರಡಿಸಿದ ಮೂರು ತಿಂಗಳ ಒಳಗಾಗಿ ಈ ಪ್ರಾಧಿಕಾರ ರಚಿಸುವುದು ಕಡ್ಡಾಯವಾಗಿರುತ್ತದೆ. ಕಟ್ಟಡ ನಿರ್ಮಾಣದಾರರು ಯೋಜನೆ ಪೂರ್ಣಗೊಳ್ಳುವ ದಿನಾಂಕ, ಫ್ಲಾಟ್‌ನ ಗಾತ್ರ, ಭರವಸೆ ನೀಡಲಾದ ಸೌಕರ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಬೇಕಿದೆ. ಈ ಕರಡು ನಿಯಮಾವಳಿಗೆ ಸಾರ್ವಜನಿಕರು ಜುಲೈ 8ರೊಳಗೆ ಅಭಿಪ್ರಾಯಗಳನ್ನು ತಿಳಿಸಬಹುದು. ಮನೆ ನಿರ್ಮಾಣ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ ಮೇ 1ರಿಂದ ಜಾರಿಗೆ ಬಂದಿರುವ ರಿಯಲ್ ಎಸ್ಟೇಟ್(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-2016ರ ಕೆಲ ಸೆಕ್ಷನ್‌ಗಳ ಅನ್ವಯ ಈ ಕರಡು ನಿಯಮಾವಳಿಗಳನ್ನು ರೂಪಿಸಿದೆ. ಸಾಲದ ಮೇಲಿನ ಬಡ್ಡಿ ದರಕ್ಕಿಂತ ಶೇ. 2ರಷ್ಟು ಅಧಿಕ ಬಡ್ಡಿಯನ್ನು ನಿರ್ಮಾಣ ಸಂಸ್ಥೆಗಳು ಪಾವತಿಸಬೇಕಾಗುತ್ತದೆ.
ಮೂಲದಲ್ಲಿ ನೀಡಿದ ಭರವಸೆಗಿಂತ ಬದಲಾಗಿ ಅಪಾರ್ಟ್ ಮೆಂಟ್ ನಿವಾಸಿಗಳ ಶೇ. 70ರಷ್ಟು ಮಂದಿಯ ಒಪ್ಪಿಗೆ ಪಡೆಯದೆ ಗಾತ್ರ, ವಿನ್ಯಾಸದಲ್ಲಿ ಬದಲಾವಣೆ ಹಾಗೂ ಹೆಚ್ಚುವರಿ ಗೋಪುರಗಳನ್ನು ನಿರ್ಮಿಸುವುದು ಇತ್ಯಾದಿ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಪ್ರಾಧಿಕಾರ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ.





