ವೇತನ ಹೆಚ್ಚಳ: ಕೇಂದ್ರ ನೌಕರರ ಒಕ್ಕೂಟದ ತಿರಸ್ಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.29: ಕೇಂದ್ರ ಸರಕಾರ ಪ್ರಕಟಿಸಿರುವ ವೇತನ ಏರಿಕೆಯನ್ನು ಕೇಂದ್ರ ಸರಕಾರಿ ಉದ್ಯೋಗಿಗಳ ಒಕ್ಕೂಟವು ಬುಧವಾರ ತಿರಸ್ಕರಿಸಿದ್ದು, ಜುಲೈ 4ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯುವ ಬೆದರಿಕೆ ಹಾಕಿದೆ.
ಪ್ರಚಲಿತ ಅರ್ಥಿಕ ಪರಿಸ್ಥಿತಿಯಲ್ಲಿ ಈ ವೇತನ ಏರಿಕೆಯು ಅಸಮರ್ಪಕವಾದುದಾಗಿದೆ. ಇದು ನಮಗೆ ಅಸ್ವೀಕಾರಾರ್ಹವಾಗಿದೆಯೆಂದು ಕೇಂದ್ರ ಸರಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ. ದೊರೈಪಾಂಡಿಯನ್ ತಿಳಿಸಿದ್ದಾರೆ.
ತಮ್ಮ ಬೇಡಿಕೆಯಂತೆ ವೇತನ ಶ್ರೇಣಿಯನ್ನು ಪರಿಷ್ಕರಿಸದೆ ಇದ್ದಲ್ಲಿ ಜುಲೈ 4ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.
ಈ ಮಧ್ಯೆ ವಿವಿಧ ಕಾರ್ಮಿಕ ಸಂಘಟನೆಗಳು ಕೂಡಾ ಸರಕಾರಿ ನೌಕರರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿವೆ ಹಾಗೂ ವೇತನ ಏರಿಕೆಯ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಕಳೆದ 17 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಕನಿಷ್ಠ ಮಟ್ಟದ ವೇತನ ಏರಿಕೆಯಾಗಿದ್ದು, ಕನಿಷ್ಠ ಹಾಗೂ ಗರಿಷ್ಠ ವೇತನಗಳ ನಡುವಿನ ಅಸಮಾನತೆಯನ್ನು ಹೆಚ್ಚಿಸಿದೆಯೆಂದು ಅವು ಟೀಕಿಸಿವೆ.





