ನಿವೃತ್ತಿ ಸುಳಿವು ನೀಡಿದ ಸ್ಪೇನ್ ಗೋಲ್‌ಕೀಪರ್ ಕ್ಯಾಸಿಲಸ್

ಮ್ಯಾಡ್ರಿಡ್, ಜೂ.29: ಸ್ಪೇನ್‌ನ ಪ್ರಸಿದ್ಧ ಗೋಲ್‌ಕೀಪರ್ ಐಕರ್ ಕ್ಯಾಸಿಲಸ್ ತನ್ನ 16 ವರ್ಷಗಳ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ.
35ರ ಹರೆಯದ ಐಕರ್ ಈ ವರ್ಷದ ಯುರೋ ಕಪ್‌ನಲ್ಲಿ ಸ್ಪೇನ್ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಕೋಚ್ ವಿನ್ಸೆಂಟ್ ಡೆಲ್ ಬಾಸ್ಕ್ ಅವರು ಐಕರ್ ಕ್ಯಾಸಿಲಸ್ ಬದಲಿಗೆ ಮ್ಯಾಂಚೆಸ್ಟರ್ ಯುನೈಟೆಡ್‌ನ ಡೇವಿಡ್ ಡಿಗಿಯಾಗೆ ಗೋಲ್‌ಕೀಪಿಂಗ್ ಜವಾಬ್ದಾರಿ ನೀಡಿದ್ದರು.
2000ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟಿದ್ದ ಕ್ಯಾಸಿಲಸ್ ಸ್ಪೇನ್‌ನ ಪರ 167 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸ್ಪೇನ್ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ್ದ ಹೆಗ್ಗಳಿಕೆ ಹೊಂದಿದ್ದಾರೆ.
ಕ್ಯಾಸಿಲಸ್ ತನ್ನ ಟ್ವಿಟರ್ ಖಾತೆಯಲ್ಲಿ ‘ನನಗೆ ಗೊತ್ತಿಲ್ಲ, ನಾನೆಲ್ಲಿಗೆ ಹೋಗುವೆ’ ಎಂಬ ರ್ಯಾಂಬೊ ಚಿತ್ರದ ಸಂಭಾಷಣೆ ಹಾಕಿದ್ದಾರೆ.
ಜನರ ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸವನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ ಎಂದು ಕ್ಯಾಸಿಲಸ್ ಟ್ವೀಟ್ ಮಾಡಿದ್ದಾರೆ.





