ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಮುನಿಸು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಕಾರಣ?
<ಬಿ. ರೇಣುಕೇಶ್
ಶಿವಮೊಗ್ಗ, ಜೂ.29: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರ ನಡುವೆ ಮತ್ತೆ ಭಿನ್ನಾಭಿಪ್ರಾಯ ಭುಗಿಲೆದಿದ್ದಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕದಲ್ಲಿ ತಮ್ಮ ಬೆಂಬಲಿಗರಿಗೆ ಮಣೆ ಹಾಕಿದ್ದಾರೆ ಎಂದು ಆರೋಪಿಸಿ ಕೆಎಸ್‌ಇರವರು ಬಹಿರಂಗವಾಗಿಯೇ ಬಿಎಸ್‌ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಇಬ್ಬರು ಅತಿರಥ-ಮಹಾರಥ ಮುಖಂಡರ ನಡುವಿನ ಮುನಿಸು ಅವರಿಬ್ಬರ ತವರೂರು ಶಿವಮೊಗ್ಗ ಜಿಲ್ಲಾ ಬಿಜೆಪಿಯ ಮೇಲೆ ಬೀರಿದೆ. ಮುಖಂಡರು-ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದು ಬಣ ರಾಜಕಾರಣಕ್ಕೂ ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಿಎಸ್‌ವೈ-ಕೆಎಸ್‌ಇ ಬೆಂಬಲಿಗರ ನಡುವೆ ರಾಜಕೀಯ ಮೇಲಾಟಕ್ಕೂ ಅವಕಾಶ ಕಲ್ಪಿಸುವ ಲಕ್ಷಣಗಳು ಗೋಚರವಾಗುತ್ತಿವೆ. ಅಸಮಾಧಾನ?:ಈ ಹಿಂದೆ ತವರೂರು ಶಿವಮೊಗ್ಗ ಜಿಲ್ಲೆಯಲ್ಲಿ ಬಿಎಸ್‌ವೈ ಪ್ರಾಬಲ್ಯ ಹೊಂದಿದ್ದರು. ಪಕ್ಷದ ಪದಾಧಿಕಾರಿಗಳ ನೇಮಕ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಅವರ ನಿರ್ಧಾರವೇ ಅಂತಿಮವಾಗಿತ್ತು. ಆ ಮಟ್ಟಕ್ಕೆ ಪಕ್ಷದ ಮೇಲೆ ಅವರು ಹಿಡಿತ ಸಾಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದರು. ಮತ್ತೆ ಬಿಜೆಪಿಗೆ ಮರು ಸೇರ್ಪಡೆಯಾದರು. ಆದರೆ ಜಿಲ್ಲಾ ಬಿಜೆಪಿಯಲ್ಲಿ ಈ ಹಿಂದಿದ್ದ ಹಿಡಿತ, ಪ್ರಾಬಲ್ಯ ಕಳೆದುಕೊಂಡಿದ್ದರು. ಜಿಲ್ಲಾ ಬಿಜೆಪಿಗೆ ಕೆಎಸ್‌ಇರವರೇ ನಿರ್ಣಾಯಕರಾಗಿದ್ದರು. ಉದ್ದೇಶಪೂರ್ವಕವಾಗಿಯೇ ಬಿಎಸ್ ಅವರನ್ನು ಕಡೆಗಣನೆ ಮಾಡಿಕೊಂಡು ಬರಲಾಗುತ್ತಿದ್ದ ಆರೋಪ ಕೂಡ ಕೇಳಿಬಂದಿತ್ತು. ಈ ಕುರಿತಂತೆ ಹಲವು ಬಾರಿ ಬೆಂಬಲಿಗರು ಬಿಎಸ್‌ವೈ ಗ
ುನಕ್ಕೆ ತಂದಿದ್ದರು. ಸ್ಥಳೀಯ ಮುಖಂಡರು ತಮ್ಮ ಮಾತು ಕೇಳುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದಿರಿ ಎಂದು ಬೆಂಬಲಿಗರಿಗೆ ತಿಳಿ ಹೇಳುತ್ತಿದ್ದರು. ಅದರಂತೆ ಬಿಎಸ್‌ವೈ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಚುಕ್ಕಾಣಿ ಅಲಂಕರಿಸಿದರು. ಮತ್ತೆ ಜಿಲ್ಲಾ ಬಿಜೆಪಿಯಲ್ಲಿ ಹಿಡಿತ ಸಾಧಿಸುವ ರೂಪುರೇಷೆ ಸಿದ್ದಪಡಿಸಿದರು. ಮುನಿಸು:
ಪ್ರಸ್ತುತ ಜಿಲ್ಲಾಧ್ಯಕ್ಷರಾಗಿರುವ ಎಸ್.ರುದ್ರೇಗೌಡರವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಎಸ್‌ಇ ವಿರುದ್ಧ ಶಿವಮೊಗ್ಗ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕೆಎಸ್‌ಇ ಪರಾಭವದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಎಸ್.ರುದ್ರೇಗೌಡರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಬಿಎಸ್‌ವೈ ನಿಯೋಜಿಸಿರುವುದು ಕೆಎಸ್‌ಇಗೆ ತೀವ್ರ ಇರುಸು ಮುರುಸು ಉಂಟು ಮಾಡಿದೆ. ಒಟ್ಟಾರೆ ಬಿಎಸ್‌ವೈ ಹಾಗೂ ಕೆಎಸ್‌ಇ ನಡುವೆ ಮತ್ತೆ ಜಟಾಪಟಿ ಶುರುವಾಗಿರುವುದು ಅವರ ತವರೂರು ಶಿವಮೊಗ್ಗ ಜಿಲ್ಲಾ ಬಿಜೆಪಿ ಸಂಘಟನೆಯ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ ಬಣ ರಾಜಕಾರಣಕ್ಕೆ ವೇದಿಕೆ ಸೃಷ್ಟಿಯಾಗಿರುವುದಂತೂ ಸತ್ಯವಾಗಿದೆ.







