ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಶಾಸಕರ ಸೂಚನೆ
ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ

ಮಡಿಕೇರಿ ಜೂ.29 : ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಎಸ್‌ಜಿಎಸ್‌ವೈ ಸಭಾಂಗಣ ದಲ್ಲಿ ನಡೆದ ಮಡಿಕೆೇರಿ ತಾಲೂಕು ಪಂಚಾಯತ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯಾ ಗ್ರಾಮೀಣ ಭಾಗಗಳಲ್ಲಿರುವ ಅನಧಿಕೃತ ಹೋಂಸ್ಟೇಗಳ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೂರು ದಿನಗಳ ಒಳಗಾಗಿ ವರದಿ ನೀಡಲು ಸೂಚಿಸಿದ್ದಾರೆ.
ಈ ವರೆಗೂ ನೋಂದಣಿಯಾಗದ ಹೋಂಸ್ಟೇ ಗಳನ್ನು ಗುರುತಿಸಿ ನೋಂದಣಿ ಮಾಡಿಸುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಆಯಾ ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿನ ಅನಧಿಕೃತ ಹೋಂ ಸ್ಟೇಗಳ ಬಗ್ಗೆ ವರದಿ ನೀಡಿದಲ್ಲಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ಕಾಲೇಜ್‌ಗಳಲ್ಲಿ ಡ್ರಗ್ಸ್ ಹಾವಳಿ: ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ತೀವ್ರ ಕಳವಳ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ಬಳಕೆಯ ಬಗ್ಗೆ ಆಯಾ ಪ್ರದೇಶದ ಪೊಲೀಸ್ ಸಿಬ್ಬಂದಿಗಳಿಗೆ ಖಚಿತ ಮಾಹಿತಿಗಳಿವೆ. ಇಲಾಖಾ ವತಿಯಿಂದ ಆಯಾ ಪ್ರದೇಶದ ಎಸೈಗಳನ್ನು ಕಾಲೇಜುಗಳಿಗೆ ಕಳುಹಿಸಿ, ಡ್ರಗ್ಸ್ ಬಳಕೆಯ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪ್ರಮುಖವಾಗಿ ಕೊಡಗಿನ ಗಡಿ ಭಾಗದ ಪಿರಿಯಾಪಟ್ಟಣದ ಕಡೆಯಿಂದ ಜಿಲ್ಲೆಗೆ ಡ್ರಗ್ಸ್ ಬರುತ್ತಿದೆ ಎಂದು ಶಾಸಕರು ಸಂಶಯ ವ್ಯಕ್ತಪಡಿಸಿದರು.
94ಸಿ ಅರ್ಜಿ ಸಲ್ಲಿಸಲು ಸೆಪ್ಟಂಬರ್ ಕೊನೆ ವರೆಗೆ ಅವಕಾಶ:ಬಡವರಿಗೆ ಮನೆ ನಿರ್ಮಿಸಲು ಅವಕಾಶ ಮಾಡುವ (ಅಕ್ರಮ-ಸಕ್ರಮ) 94ಸಿ ಅಡಿ ಅರ್ಜಿ ಸಲ್ಲಿಸಲು ಸೆಪ್ಟಂಬರ್ ಅಂತ್ಯದವರೆಗೆ ಅವಕಾಶ ಇದೆ ಎಂದು ತಹಶೀಲ್ದಾರ್ ಕುಂಜಮ್ಮ ಸಭೆಯಲ್ಲಿ ತಿಳಿಸಿದರು. ಮಡಿಕೇರಿ ತಾಲೂಕಿನಲ್ಲಿ 94ಸಿ ಅಡಿ 1382ಅರ್ಜಿಗಳು ಸಲ್ಲಿಕೆಯಾಗಿದ್ದು, 181ಅರ್ಜಿಗಳ ಸರ್ವೇ ಕಾರ್ಯ ಮುಗಿದಿದೆ. ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಥಮ ಆದ್ಯತೆಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ: ರಾಷ್ಟ್ರದ ಈಶಾನ್ಯ ಭಾಗದ ರಾಜ್ಯಗಳಿಂದ ಬಂದವರೆಂದು ಹೇಳಿಕೊಳ್ಳುವ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಜಿಲ್ಲೆಯಲ್ಲಿದ್ದು, ಈಗಾಗಲೇ ತೋಟದ ಮಾಲಕರಿಗೆ ತಮ್ಮಲ್ಲಿರುವ ಹೊರ ಭಾಗದ ಕಾರ್ಮಿಕರ ಪೋಟೋಗಳನ್ನು ಪೊಲೀಸರಿಗೆ ನೀಡಬೇಕೆಂದು ಸೂಚಿಸಲಾಗಿದೆ. ಪೊಲೀಸ್ ಇಲಾಖೆ ಅಕ್ರಮ ವಲಸಿಗರ ಬಗ್ಗೆ ನಿಗಾವಹಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ವಿತರಣೆ, ಅಂಗನವಾಡಿ ಕಟ್ಟಡಗಳ ಸುಸ್ಥಿತಿ ಮತ್ತಿತರ ಬಗ್ಗೆ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಸಿಡಿಪಿಒ ಅವರಿಂದ ಮಾಹಿತಿ ಪಡೆದರು. ಈ ಬಗ್ಗೆ ಮಾಹಿತಿ ನೀಡಿದ ಸಿಡಿಪಿಒ ದಮಯಂತಿ ಅವರು ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತದೆ. ಮಡಿಕೇರಿ ತಾಲೂಕಿನಲ್ಲಿ 247ಮುಖ್ಯ ಅಂಗನವಾಡಿಗಳು, 4ಮಿನಿ ಅಂಗನವಾಡಿಗಳು, 25ಅಂಗನವಾಡಿಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿ ಇವೆ ಎಂದು ಅವರು ತಿಳಿಸಿದರು. ಮಡಿಕೇರಿ ತಾಲೂಕಿನಲ್ಲಿ ಶಾಲಾಭಿವೃದ್ಧಿ ಸಮಿತಿ ಸಭೆ, ಶಾಲೆಗಳ ಕಟ್ಟಡ ಸ್ಥಿತಿ, ಸಿಆರ್‌ಸಿ ಮತ್ತು ಬಿಆರ್‌ಸಿ ಗಳ ಕಾರ್ಯ ನಿರ್ವಹಣೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಪರಿಶೀಲನೆ ಮಾಡಬೇಕು. ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹಣ ನೀಡಿದರೂ ಸಹ ಬಳಕೆ ಮಾಡಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ಅತೃಪ್ತಿ ವ್ಯಕ್ತಪಡಿಸಿದರು.
ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ಕಡಮಕಲ್ಲು ಶಾಲೆ ದುರಸ್ತಿಯಲ್ಲಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಸುಭಾಷ್ ಸೋಮಯ್ಯ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷರಾದ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ತಾಪಂ ಇಒ ಜೀವನ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಪಿಡಿಒಗಳು, ಎಂಎಲ್ಸಿ ಸುನಿಲ್ ಸುಬ್ರಮಣಿ, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು







