ಶಾಲಾ ವಾಹನಗಳಿಗೆ ಸಿ್ಪೀಡ್ ಗವರ್ನರ್ ಕಡ್ಡಾಯ: ಶಿವರಾಜ್ ಪಾಟೀಲ್
ಶಿವಮೊಗ್ಗ, ಜೂ.29: ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್, ಜಿಪಿಆರ್‌ಎಸ್, ಸಿ. ಸಿ. ಕ್ಯಾಮರಾ ಅಳವಡಿಸಬೇಕು ಎಂದು ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿ (ಆರ್.ಟಿ.ಒ.) ಶಿವರಾಜ್ ಪಾಟೀಲ್‌ರವರು ತಿಳಿಸಿದ್ದಾರೆ.
ಬುಧವಾರ ನಗರದ ಮೇರಿ ಇಮಾಕ್ಯುಲೇಟ್ ಹೈಸ್ಕೂಲ್ ಸಭಾಂಗಣದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಶಾಲಾ ಬಸ್‌ನಲ್ಲಿ ಮಕ್ಕಳ ಸುರಕ್ಷತೆ’ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲಾ ಬಸ್‌ಗಳಿಗೆ ಕಡ್ಡಾಯವಾಗಿ ಹಳದಿ ಬಣ್ಣ ಬಳಿದಿರಬೇಕು. ನಿಯಮ ಉಲ್ಲಂಘಿಸಿ ಸಂಚರಿಸುವ ಶಾಲಾ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪರ್ಮಿಟ್ ರದ್ದುಪಡಿಸಲಾಗುವುದು. ಹಾಗೆಯೇ ವಿದ್ಯಾ ಸಂಸ್ಥೆಯ ಅನುಮತಿ ಕೂಡ ರದ್ದುಗೊಳಿಸಲು ಕಾನೂನಿ ನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ರವರು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ವಾಣಿಜ್ಯ ಉದ್ದೇಶಕ್ಕೆ ಶಾಲಾ ಮಕ್ಕಳನ್ನು ಶಾಲೆಗೆ ಸಾಗಿಸುವ ಕೆಲಸವನ್ನು ಕೈಬಿಡಿ. ಮಕ್ಕಳ ಸೇವೆ ಎಂಬ ದೃಷ್ಟಿಯಿಂದ ಸಾಗಿಸುವುದಿದ್ದರೆ ಮುಂದುವರಿಸಿ ಎಂದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸಾಗಿಸುವ ಬಾಡಿಗೆ ವಾಹನ ಮಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಾಲಕರು ತಮ್ಮ ಮಕ್ಕಳು 100 ರಷ್ಟು ಫಲಿತಾಂಶ ವನ್ನು ತೆಗೆದು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎನ್ನುವ ಕನಸನ್ನು ಕಾಣುತ್ತಿದ್ದಾರೆಯೇ ವಿನಃ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗಿ ಬರಲಿ ಎಂಬುವುದರ ಬಗ್ಗೆ ಒಂದು ದಿನವೂ ಚಿಂತಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇನ್ನ್ನು ಮುಂದೆ ಅಧಿಕೃತವಾಗಿ ಮಕ್ಕಳನ್ನು ಶಾಲೆಗೆ ಸಾಗಿಸುವ ವಾಹನಗಳಿಗೆ ಮಾತ್ರ ಪರವಾನಿಗೆ ನೀಡಲಾಗುವುದು. ಆಟೊದಲ್ಲಿ ಮತ್ತು ಓಮ್ನಿಯಲ್ಲಿ ತುಂಬಿ ತುಳುಕುವಂತೆ ಮಕ್ಕಳನ್ನು ಸಾಗಿಸುವುದಕ್ಕೆ ಪಾಲಕರು ಅವಕಾಶ ಕೊಡಬಾರದು. ಇತ್ತೀಚೆಗೆ ಕುಂದಾಪುರ ಬಳಿ ಸಂಭವಿಸಿದ ಶಾಲಾ ಬಸ್ ದುರಂತ ಪಾಲಕರ ಕಣ್ತೆರೆಸಬೇಕೆಂದು ಹೇಳಿದರು.
ಸಭೆಯಲ್ಲಿ ಡಿವೈಎಸ್ಪಿ ಡಾ. ರಾವ್ ಅರಸಿದ್ದಿ, ರಾಷ್ಟ್ರೀಯ ಸುರಕ್ಷತಾ ಪರಿಷತ್‌ನ ನಿರ್ದೇಶಕ ಎಸ್. ರಾಜಗೋಪಾಲ್, ಡಿಡಿಪಿಐ ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.







