ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ತುಳು ಸೇರ್ಪಡೆ ಸಾಧ್ಯತೆ ಮತ್ತು ಸವಾಲು

‘‘ಅಯ್ಯ ಎಂಚ ಪೊರ್ಲಾಂಡುನ್ದ ತುಳುವೆರ್’’ ಎಂದು ಉದ್ಗರಿಸಿದ ‘ಭರತೇಶ ವೈಭವ’ವೆಂಬ ಮಹತ್ಕೃತಿಯನ್ನು ಕನ್ನಡಕ್ಕೆ ಸಲ್ಲಿಸಿದ ರತ್ನಾಕರ ವರ್ಣಿ,‘‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’’ ಎಂಬ ಉದ್ಘೋಷದೊಡನೆ ‘ರಾಮೇಶ್ವಮೇಧ’ವೆಂಬ ಶ್ರೇಷ್ಠ ಗ್ರಂಥವನ್ನು ಕನ್ನಡಕ್ಕೆ ಅರ್ಪಿಸಿದ ಕನ್ನಡದ ಮುಂಗೋಳಿ ಎಂದು ಹೆಸರಾದ ಮುದ್ದಣ - ಇವರೀರ್ವರೂ ತುಳುನಾಡಿನ ಅನರ್ಘ್ಯ ರತ್ನಗಳು. ಇವರಿಬ್ಬರೂ ತುಳುವರಾಗಿದ್ದರೂ, ತುಳು ಭಾಷೆಯಲ್ಲಿ ಯಾಕೆ ಬರೆಯಲಿಲ್ಲ? ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ, ಶ್ರೀಮಂತ ವೌಖಿಕ ಪರಂಪರೆಯಿರುವ ಸ್ವತಂತ್ರ ಭಾಷೆಯಾಗಿರುವ ತುಳು, ಯಾಕೆ ರತ್ನಾಕರವರ್ಣಿ ಮತ್ತು ಮುದ್ದಣರಂತಹ ತುಳುನಾಡಿನ ಕವಿಗಳ ಕಾವ್ಯಸೃಷ್ಟಿಯ ಮಾಧ್ಯಮವಾಗಲು ವಿಫಲಗೊಂಡಿತು?
ಸಾಹಿತ್ಯ ಕ್ರಿಯೆಯಲ್ಲಿ ಭಾಷೆಯ ಪ್ರಶ್ನೆ ಬಂದಾಗ, ಅದು ಕವಿಯ ವ್ಯಕ್ತಿಗತ ಆಯ್ಕೆಯೆಂದು ಸುಲಭವಾಗಿ ತಳ್ಳಿಹಾಕಬಹುದು.
ಆದರೆ, ಈ ಪ್ರಶ್ನೆಗಳಿಗೆ ಮಹತ್ವವಾದ ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳಿವೆ. ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ಅರಿವಾಗುವ ಮುಖ್ಯ ವಿಚಾರವೆಂದರೆ, ಆಳುವ ವರ್ಗದ ಭಾಷೆ ಯಾವಾಗಲೂ ಆಳುವ ಭಾಷೆಯಾಗಿರುತ್ತದೆ. ‘‘
ಛಿ ್ಝಚ್ಞಜ್ಠಜಛಿ ಟ್ಛ ಠಿಛಿ ್ಚ್ಝ ಜಿ ಠಿಛಿ ್ಟ್ಠ್ಝಜ್ಞಿಜ ್ಝಚ್ಞಜ್ಠಜಛಿೞೞ ಹಲವು ಶತಮಾನಗಳ ಕಾಲ ನಮ್ಮನ್ನಾಳಿದ ಅಳುಪರಿಂದ ಹಿಡಿದು, ವಿಜಯನಗರದ ಅರಸರವರೆಗೂ, ಆಡಳಿತ ಭಾಷೆಯ ಸ್ಥಾನ ಕನ್ನಡಕ್ಕೆ ದೊರಕಿತ್ತು. ತುಳುನಾಡಿನ ಸಮಸ್ತ ಜಾತಿ, ವರ್ಗಗಳಿಗೆ ಸೇರಿದ ಜನ ಸಮುದಾಯದ ಭಾಷೆಯಾದ ತುಳುವಿಗೆ ಆಡಳಿತ ಭಾಷೆಯಾಗಿರುವ ಭಾಗ್ಯ ಎಂದೂ ದಕ್ಕಿಲ್ಲ. ಸುಮಾರು ನೂರೈವತ್ತು ವರ್ಷಗಳಷ್ಟು ಕಾಲ ಬ್ರಿಟಿಷ್ ಆಡಳಿತದಲ್ಲಿದ್ದ ತುಳುನಾಡು, ತುಳುಭಾಷೆಯ ನಿಟ್ಟಿನಲ್ಲಿ ಹೆಚ್ಚಿನ ಬದಲಾವಣೆ ಕಾಣಲಿಲ್ಲ. ಸ್ವಾತಂತ್ರೋತ್ತರ ಭಾರತದಲ್ಲಿ ಭಾಷಾವಾರು ವಿಂಗಡಣೆಯ ಆಧಾರದ ಮೇಲೆ ತುಳುನಾಡು ಕರ್ನಾಟಕದ ರಾಜ್ಯದ ಅಂಗವಾಗಿ ವಿಲೀನಗೊಂಡಿತು. ಇಂದು ಕರ್ನಾಟಕದಲ್ಲಿ ಕನ್ನಡವೊಂದೇ ರಾಜ್ಯ ಭಾಷೆಯಾದ ಕಾರಣ, ಅದು ‘ರಾಜ್ಯ’ ಭಾಷೆಯಾಗಿ ಮುಂದುವರಿದಿದೆ. ಅವಿಭಜಿತ ದಕ್ಷಿಣ ಕನ್ನಡದ ಲಕ್ಷಾಂತರ ಜನರ ಮಾತೃ ಭಾಷೆ ಯಾಗಿರುವ ತುಳು ಸ್ವತಂತ್ರ ಭಾರತದ ಅಧಿಕೃತ ಭಾಷೆಗಳ ಸೇರ್ಪಡೆಯಾಗುವಲ್ಲಿ ವಿಫಲಗೊಂಡು ಎರಡನೆ ದರ್ಜೆಯಲ್ಲಿ ಮುಂದುವರಿಯುತ್ತಿದೆ. ಇದು ತುಳುಭಾಷೆಯ ಕತೆ-ವ್ಯಥೆ. ಇದು ತುಳುವರ ಕರ್ಮಕತೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ಅದರದ್ದೇ ಆದ ವಿಶಿಷ್ಟ ಪರಂಪರೆ ಮತ್ತು ಇತಿಹಾಸವಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕಾಸರಗೋಡಿನವರೆಗೆ ಚಾಚಿರುವ ತುಳುನಾಡು ದಕ್ಷಿಣ ಭಾರತದ ಇತಿಹಾಸದ ಪುಟಗಳಲ್ಲಿ ಸದಾ ರಾರಾಜಿಸಿದೆ. ತುಳುನಾಡಿನ ಜನವಾಹಿನಿಯ ಮಾತೃ ಭಾಷೆಯಾಗಿರುವ ತುಳು ಸ್ವತಂತ್ರ ಭಾಷೆಯೆನ್ನುವುದು ನಿರ್ವಿವಾದ. ರಾಬರ್ಟ್ ಕಾಲ್ಡ್ ವೆತ್ ಎಂಬ ಪ್ರಮುಖ ಭಾಷಾ ವಿಜ್ಞಾನಿಯ ಅಭಿಪ್ರಾಯದಂತೆ ತುಳು ಭಾಷೆ ದ್ರಾವಿಡ ಸಮುದಾಯದ ಸಮೃದ್ಧ ಭಾಷೆಗಳಲ್ಲಿ ಒಂದಾಗಿದೆ.
ತುಳುವಿಗೆ ಅದರದ್ದೇ ಆದ ಶ್ರೇಷ್ಠ ವೌಖಿಕ ಪರಂಪರೆಯಿದೆ, ಅಷ್ಟು ಮಾತ್ರವಲ್ಲದೆ, ಅರುಣಾಬ್ಜ್ಬನ ತುಳು ಮಹಾಭಾರತದಿಂದ ಹಿಡಿದು, ಮಂದಾರ ರಾಮಾಯಣದವರೆಗೂ ತುಳು ಸಾಹಿತ್ಯ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿದೆ. ಇಂದಿಗೂ ವಿಭಜಿತ ದಕ್ಷಿಣ ಕನ್ನಡದ ಮಾತ್ರವಲ್ಲದೆ, ಕೇರಳ ರಾಜ್ಯದ ಭಾಗವಾಗಿರುವ ಕಾಸರಗೋಡಿನಲ್ಲಿ ಕೂಡ ತುಳು ಪ್ರಮುಖ ವ್ಯಾವಹಾರಿಕ ಭಾಷೆಯಾಗಿ ಮುಂದುವರಿದಿದೆ. ನಿರಂತರವಾಗಿ ತುಳು ಭಾಷೆಯಲ್ಲಿ ಯಕ್ಷಗಾನ, ನಾಟಕ ಮತ್ತು ಸಿನೆಮಾಗಳು ಬರುತ್ತಿವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತುಳು ಅಕಾಡಮಿಯ ಸ್ಥಾಪನೆಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಭಾಷೆಯ ಕಲಿಕೆ-ಸಂಶೋಧನೆ ನಡೆಯುತ್ತಿದೆ. ಕುಪ್ಪಮ್ ನ ದ್ರವಿಡಿಯನ್ ವಿಶ್ವವಿದ್ಯಾನಿಲಯದಲ್ಲಿ ತುಳುವಿನ ಅಧ್ಯಯನ ಆರಂಭವಾಗಿದೆ. ದಕ್ಷಿಣ ಕನ್ನಡದ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ತುಳು ಭಾಷೆಯನ್ನು ಕಲಿಯುವ ಸದವಕಾಶ ಲಭ್ಯವಾಗಿದೆ. ಇಂತಹ ಸಂಪನ್ನ ಭಾಷೆಗೆ ಯಾಕೆ ಭಾರತೀಯ ಸಂವಿಧಾನದ ಮನ್ನಣೆ ಸಿಕ್ಕಿಲ್ಲ?
ಎಲ್ಲರಿಗೂ ತಿಳಿದಂತೆ, ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಇದುವರೆಗೆ ಭಾರತದ 22 ಭಾಷೆಗಳು ಸೇರ್ಪಡೆಯಾಗಿವೆ. ನಮ್ಮ ಸಂವಿಧಾನ ಶಿಲ್ಪಿಗಳು ಭಾರತದ ಗಣತಂತ್ರದ ಅಖಂಡತೆ ಉಳಿಸಲು ಈ ದೇಶದ ಸಮೃದ್ಧ ಭಾಷಾ ವೈವಿಧ್ಯವನ್ನು ಗುರುತಿಸುವ ಆವಶ್ಯಕತೆಯನ್ನು ಮನಗಂಡಿದ್ದರು. ಈ ನಿಟ್ಟಿನಲ್ಲಿ, 1949ರಲ್ಲಿ ಸಂವಿಧಾನದ ಉದಯವಾದಾಗ ಎಂಟನೆ ಪರಿಚ್ಛೇದದಲ್ಲಿ ಹಿಂದಿ, ಕನ್ನಡ ಸೇರಿದಂತೆ ಒಟ್ಟು ಹದಿನಾಲ್ಕು ಭಾಷೆಗಳು ಸೇರ್ಪಡೆಯಾದವು. ಹಿಂದಿ ರಾಷ್ಟ್ರ ಭಾಷೆಯ ಮನ್ನಣೆ ಪಡೆಯಿತು ಮತ್ತು ಇಂಗ್ಲಿಷ್ ಪರಿಚ್ಛೇದದಲ್ಲಿ ಸೇರ್ಪಡೆಯಾಗಿದ್ದರೂ, ಸಂಪರ್ಕ ಭಾಷೆಯೆಂಬ ಹಣೆಪಟ್ಟಿಯೊಂದಿಗೆ ಮುಂದುವರಿಯಿತು. ಹದಿನೇಳು ವರ್ಷಗಳ ನಂತರ 1967ರಲ್ಲಿ ಸಿಂಧಿ ಬಾಷೆ ಈ ಅಧಿಕೃತ ಪಟ್ಟಿಗೆ ಸೇರ್ಪಡೆಯಾಯಿತು.
1992ರಲ್ಲಿ ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಭಾಷೆಗಳು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರ್ಪಡೆಯಾದವು. 2003ರಲ್ಲಿ ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಪಾಲಿ ಭಾಷೆಗಳು ಸೇರ್ಪಡೆಯ ಸಲುವಾಗಿ, ಇಂದು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ 22 ಭಾರತೀಯ ಭಾಷೆಗಳಿಗೆ ಅಧಿಕೃತ ಮನ್ನಣೆ ದೊರೆತಿದೆ. 38 ಭಾಷೆಗಳು ಸಂವಿಧಾನದ ಬಾಗಿಲಿನ ಹೊರಗೆ ಕಾಯುತ್ತಾ ಕುಳಿತಿವೆ. ಈ ಗುಂಪಲ್ಲಿ ತುಳು ಭಾಷೆಯೂ ಸೇರಿದೆ.
ತುಳು ಭಾಷೆಗೆ ಸಂವಿಧಾನದ ಮನ್ನಣೆ ಅಗತ್ಯವಿದೆಯೇ? ಖಂಡಿತವಾಗಿಯೂ ಇದೆ. ಒಂದು ಭಾಷೆಗೆ ಸಂವಿಧಾನದ ಮನ್ನಣೆ ಸಿಕ್ಕಿದರೆ, ಅದು ರೆಕ್ಕೆಯಿಲ್ಲದ ಹಕ್ಕಿಗೆ ರೆಕ್ಕೆ ಜೋಡಿಸಿದಂತೆ. ರೆಕ್ಕೆಯಿಲ್ಲದ ಹಕ್ಕಿ ಕೆಲಕಾಲ ತೆವಳುತ್ತಾ ಬದುಕಬಲ್ಲುದು, ಅಷ್ಟೆ. ಅದಕ್ಕೆ ರೆಕ್ಕೆ ಸಿಕ್ಕರೆ, ಅದು ಗರಿಗೆದರಿ ಆಕಾಶಕ್ಕೆ ನೆಗೆಯುತ್ತದೆ. ನೆರೆಯ ರಾಜ್ಯವಾದ ಗೋವಾದಲ್ಲಿ ನೆಲೆಸಿರುವ ನಾನು 1992ರ ನಂತರ ಕೊಂಕಣಿ ಭಾಷೆ ಹೇಗೆ ತ್ವರಿತ ಗತಿಯಲ್ಲಿ ಬೆಳೆಯಿತು ಎಂಬುದನ್ನು ಕಂಡು ಸಂಭ್ರಮಿಸಿದ್ದೇನೆ. 1988ರಲ್ಲಿ ನಾನು ಗೋವೆಗೆ ಹೋದಾಗ ಅಲ್ಲಿ ಒಂದು ಕೂಡಾ ಕೊಂಕಣಿ ಮಾಧ್ಯಮವಿರುವ ಶಾಲೆ ಇರಲಿಲ್ಲ. ಇಂದು ನೂರಾರು ಕೊಂಕಣಿ ಮಾಧ್ಯಮ ಶಾಲೆಗಳು ರಾಜ್ಯಾದ್ಯಂತ ತಲೆಯೆತ್ತಿವೆ.
ಯಾವುದೇ ಭಾಷೆ ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆ ಭಾಷೆಗೆ ಶಿಕ್ಷಣ ಮಾಧ್ಯಮವಾಗಲು ಇರುವ ಅರ್ಹತೆಯನ್ನು ಗುರುತಿಸುತ್ತವೆ. ಇದೇ ಅತ್ಯಂತ ಮಹತ್ವದ ಪ್ರಯೋಜನವಾಗಿದೆ. ಇಂದು ತುಳು ದಕ್ಷಿಣ ಕನ್ನಡದ ಕೆಲವು ಶಾಲೆಗಳಲ್ಲಿ ಭಾಷೆಯ ರೂಪದಲ್ಲಿ ಕಲಿಸಲ್ಪಟ್ಟರೂ ಶಿಕ್ಷಣದ ಮಾಧ್ಯಮವಾಗುವ ಹಂತ ತಲುಪಿಲ್ಲ. ಭಾಷಾ ವಿಜ್ಞಾನಿಗಳ ಅಭಿಪ್ರಾಯ ಪ್ರಕಾರ ಯಾವ ಭಾಷೆ ಶಿಕ್ಷಣದ ಮಾಧ್ಯಮವಾಗಿ ಉಳಿಯುತ್ತದೆಯೋ, ಅದು ಸದಾಕಾಲ ಜೀವಂತವಾಗಿರುತ್ತದೆ. ತುಳು ಭಾಷೆಗೆ ಮಾಧ್ಯಮವಾಗುವ ಶಕ್ತಿ ಮತ್ತು ಅರ್ಹತೆಗಳಿವೆ. ಅವಕಾಶ ಮಾತ್ರ ಸಿಕ್ಕಿಲ್ಲ. 90ರ ದಶಕದಲ್ಲಿ ಗೋವಾ ರಾಜ್ಯದಲ್ಲಿ ಕೊಂಕಣಿಯ ಸ್ಥಾನಮಾನ ಹೆಚ್ಚು ಕಡಿಮೆ ಹೀಗೆ ಇತ್ತು. ಕೊಂಕಣಿ ಮಾಧ್ಯಮದ ಬಗ್ಗೆ ಮೂಗು ಮುರಿಯುವ ಬಹಳಷ್ಟು ಜನ. ಆದರೆ, ರಾಜ್ಯ ಸರಕಾರದ ಬೆಂಬಲದಿಂದ ಇಂದು ಕೊಂಕಣಿ ಮಾಧ್ಯಮ ಶಾಲೆಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಎಂಟನೆ ಪರಿಚ್ಛೇದಕ್ಕೆ ತುಳು ಸೇರಿದರೆ, ತುಳು ಮಾಧ್ಯಮದ ಶಾಲೆಗಳು ಹುಟ್ಟಬಹುದು ಮತ್ತು ತುಳು ಮಾತೃ ಭಾಷೆಯಾಗಿರುವ ಸಾವಿರಾರು ಮಕ್ಕಳು ಅವರ ಭಾಷೆಯಲ್ಲಿಯೇ ಕಲಿಯಬಹುದು.
ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಇದಕ್ಕಿಂತ ಹೆಚ್ಚಿನ ಕೊಡುಗೆ ಬೇರೇನಿಲ್ಲ. ಇದಲ್ಲದೆ, ಎಂಟನೆ ಪರಿಚ್ಛೇದಕ್ಕೆ ಸೇರಿದ ಭಾಷೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ರೀತಿಯ ಅನುದಾನಗಳನ್ನು ನೀಡುತ್ತವೆ. ಕೇಂದ್ರ ಸಾಹಿತ್ಯ ಅಕಾಡಮಿ, ನ್ಯಾಶನಲ್ ಬುಕ್ ಟ್ರಸ್ಟ್, ಜ್ಞಾನಪೀಠ ಟ್ರಸ್ಟ್, ಮುಂತಾದ ಪ್ರಮುಖ ಸಂಸ್ಥೆಗಳು ಈ ಭಾಷೆಗಳಲ್ಲಿ ಸೃಷ್ಟಿಯಾಗುವ ಕೃತಿಗಳಿಗೆ ವಿವಿಧ ರೀತಿಯಲ್ಲಿ ಪುರಸ್ಕಾರ, ಪ್ರೋತ್ಸಾಹ ನೀಡಬಹುದು. ಬೇರೆ ರಾಜ್ಯಗಳಲ್ಲಿ ಕೂಡಾ ಭಾಷಾ ಅಲ್ಪ ಸಂಖ್ಯಾತರಿಗೆ ರಾಜ್ಯ ಸರಕಾರಗಳು ಅನುದಾನ ನೀಡುತ್ತವೆ. ಉದಾಹರಣೆಗೆ; ತುಳು ಎಂಟನೆ ಪರಿಚ್ಛೇದಕ್ಕೆ ಸೇರಿದರೆ, ಮುಂಬೈಯಲ್ಲಿರುವ ತುಳು ಬಾಂಧವರು ತುಳು ಮಾಧ್ಯಮಿಕ ಶಾಲೆ ಪ್ರಾರಂಭಿಸಬಹುದು. ಆಗ ಮಹಾರಾಷ್ಟ್ರ ಸರಕಾರ ಈ ಶಾಲೆಗಳಿಗೆ ಅನುದಾನ ನೀಡಲೇಬೇಕಾಗುತ್ತದೆ.
ತುಳು ಸ್ವತಂತ್ರ ಭಾಷೆಯಾಗಿದ್ದರೂ, ಅದರ ಅರ್ಹತೆಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳು ಹುಟ್ಟಿಕೊಂಡಿವೆ. ಮೊದಲನೆಯದಾಗಿ, ತುಳು ವ್ಯಾವಹಾರಿಕ ಭಾಷೆ, ಅದು ಗ್ರಂಥಿಕ ಭಾಷೆಯಲ್ಲ ಎಂಬುದು. ಭಾಷಾ ವಿಜ್ಞಾನದ ದೃಷ್ಟಿಯಿಂದ ಈ ಬಗೆಯ ವಿಂಗಡಣೆ ಅವೈಜ್ಞಾನಿಕ ಮತ್ತು ಅಸಂಗತ. ಭಾಷಾ ವಿಜ್ಞಾನದ ಅಲ್ಪ ಜ್ಞಾನವಿದ್ದವರು ಕೂಡಾ ಇಂತಹ ಅಸಂಬಂದ್ಧ ಹೇಳಿಕೆ ನೀಡುವುದಿಲ್ಲ. ಕನ್ನಡ ಪಠ್ಯ ಪುಸ್ತಕದಲ್ಲಿ ಅಡಕವಾಗಿರುವ ಈ ಹೇಳಿಕೆ ನಮ್ಮ ಬೌದ್ಧಿಕ ದಿವಾಳಿತನದ ಪ್ರತೀಕ. ತುಳು ಇತರ ದ್ರಾವಿಡ ಭಾಷೆಗಳ ಹಾಗೆ ಸಾವಿರಾರು ವರ್ಷಗಳ ಇತಿಹಾಸವಿರುವ ಜೀವಂತ ಭಾಷೆ ಎಂಬುದು ಭಾಷಾ ವಿಜ್ಞಾನದ ದೃಷ್ಟಿಯಲ್ಲಿ ಮುಖ್ಯವಾಗುತ್ತದೆ.
ಇದಕ್ಕೆ ಸಂಬಂಧಿಸಿದ ಇನ್ನೊಂದು ಅಪಾಯಕಾರಿ ನಂಬಿಕೆಯೇನೆಂದರೆ, ತುಳು ಭಾಷೆಗೆ ಲಿಪಿ ಇಲ್ಲ ಎಂಬುದು. ತುಳು ಭಾಷೆಗೆ ಲಿಪಿ ಇದೆಯೆಂದು ಹಲವು ವಿದ್ವಾಂಸರು ವಾದ ಮಂಡಿಸಿದ್ದಾರೆ. ಮಲಯಾಳ ಲಿಪಿಯನ್ನು ಹೋಲುವ ಆರ್ಯ ಎಳುತ್ತು ಅಥವಾ ತಿಗಳಾರಿ ಲಿಪಿಯೇ ತುಳು ಲಿಪಿಯೆಂದು ಕೆಲವು ವಿದ್ವಾಂಸರ ವಾದ. ತುಳು ಬ್ರಾಹ್ಮಣರು ಈ ಲಿಪಿಯನ್ನು ಶತಮಾನಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ ಎಂಬುದು ವಾಸ್ತವದ ಸಂಗತಿ. ಇವರು ಉಪಯೋಗಿಸಿದ ಲಿಪಿ ತುಳು ಇರಬಹುದು, ಅಥವಾ ಇಲ್ಲದಿರಬಹುದು. ಎಲ್ಲಕ್ಕಿಂತಲೂ ಮುಖ್ಯ ವಿಚಾರವೇನೆಂದರೆ, ಭಾಷೆಗೂ, ಲಿಪಿಗೂ ಯಾವ ಸಂಬಂಧವೂ ಇಲ್ಲ.
ಇಂದು ಜಾಗತಿಕ ಭಾಷೆಯಾಗಿ ಮೆರೆಯುತ್ತಿರುವ ಇಂಗ್ಲಿಷ್‌ಗೆ ಸ್ವಂತ ಲಿಪಿಯಿಲ್ಲ. ಅದು ರೋಮನ್ ಲಿಪಿ ಬಳಸುತ್ತಿದೆ. ರಾಷ್ಟ್ರ ಭಾಷೆಯಾದ ಹಿಂದಿಗೂ ಸ್ವಂತ ಲಿಪಿಯಿಲ್ಲ. ಅದು ದೇವನಾಗರಿ ಲಿಪಿಯನ್ನು ಉಪಯೋಗಿಸುತ್ತಿದೆ. ಕೊಂಕಣಿ ಭಾಷೆಗೂ ಸ್ವಂತ ಲಿಪಿಯಿಲ್ಲ. ಭಾರತದಾದ್ಯಂತ ಇರುವ ಕೊಂಕಣಿ ಭಾಷಿಗರು ದೇವನಾಗರಿ, ರೋಮನ್, ಕನ್ನಡ, ಮಲಯಾಳಂ ಮತ್ತು ಅರೇಬಿಕ್ ಲಿಪಿಯಲ್ಲಿ ಬರೆಯುತ್ತಾರೆ. ಈ ಕಾರಣದಿಂದ, ಕೊಂಕಣಿ ಭಾಷೆ ಶ್ರೀಮಂತವಾಗಿದೆ, ಆದುದರಿಂದ, ತುಳುವರು ಕನ್ನಡ ಲಿಪಿಯನ್ನು ಬಳಸಿದರೆ, ತುಳು ಭಾಷೆಗೆ ಯಾವುದೇ ರೀತಿಯಲ್ಲಿ ವ್ಯತ್ಯಯವಾಗುವುದಿಲ್ಲ.
ತುಳು ಭಾಷಿಗರ ಸಂಖ್ಯೆಯ ಬಗ್ಗೆ ಕೂಡಾ ಹಲವು ಅಪಕಲ್ಪನೆಗಳು ರೂಪುಗೊಂಡಿವೆ. 2001ರ ಜನಗಣತಿಯ ಪ್ರಕಾರ ಭಾರತದಲ್ಲಿ 17,22,768ರಷ್ಟು ಜನರ ಮಾತೃ ಭಾಷೆ ತುಳು ಆಗಿದೆ. ಈ ಸಂಖ್ಯೆ ಹಲವು ಜನರ ಸಂದೇಹಗಳನ್ನು ಸೃಷ್ಟಿಸುತ್ತದೆ. ಇದೇ ಜನಗಣತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಜನಸಂಖ್ಯೆಯ ಒಟ್ಟು ಮೊತ್ತ 42 ಲಕ್ಷ ದಾಟುತ್ತದೆ. ಈ 42 ಲಕ್ಷ ಜನಸಂಖ್ಯೆಯ ಅರ್ಧ ಕ್ಕಿಂತಲೂ ಕಡಿಮೆ ತುಳುವರು ಎಂದರೆ ಅನುಮಾನದ ಸಂಗತಿ. ದೂರದ ಮುಂಬೈ ನಗರವೊಂದರಲ್ಲೇ ಕಡಿಮೆ ಪಕ್ಷ 12-15 ಲಕ್ಷ ತುಳುವರಿದ್ದಾರೆ.
ಇನ್ನು, ಜಗತ್ತಿನಾದ್ಯಂತ ಹರಡಿರುವ ತುಳುವರನ್ನು ಸೇರಿಸಿದರೆ, ತುಳು ಭಾಷಿಗರ ಸಂಖ್ಯೆ ಖಂಡಿತವಾಗಿಯೂ 50 ಲಕ್ಷ ದಾಟುತ್ತದೆ. ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಲು ತುಳು ಭಾಷೆಗೆ ಮಾತಾಡುವ ಜನರ ಸಂಖ್ಯೆಯೆಂದೂ ಅಡ್ಡಿಯಾಗುವುದಿಲ್ಲ. ಯಾಕೆಂದರೆ, 14 ಲಕ್ಷ ಜನರು ವ್ಯವಹರಿಸುವ ಮಣಿಪುರಿ ಮತ್ತು 13 ಲಕ್ಷ ಜನರ ಮಾತೃ ಭಾಷೆಯಾಗಿರುವ ಬೋಡೋ ಭಾಷೆಗಳು ಈಗಾಗಲೇ ಪರಿಚ್ಛೇದಕ್ಕೆ ಸೇರಿವೆ. ಕೇವಲ ಹತ್ತು ಸಾವಿರ ಜನರ ಮಾತೃ ಭಾಷೆ(?)ಯಾಗಿರುವ ಸಂಸ್ಕೃತ ಕೂಡಾ ಈ ಪಟ್ಟಿಗೆ ಸೇರಿದೆ.
ಹಾಗಾದರೆ, ಭಾರತೀಯ ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಭಾರತೀಯ ಸರಕಾರದ ನಿಯಮಾವಳಿಗಳು ಏನು ಹೇಳುತ್ತವೆ? ಈ ಬಗ್ಗೆ ಹೇಳುವುದಾದರೆ, ಭಾರತ ಸರಕಾರದ ನಿಯಮಾವಳಿಗಳು ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿವೆ. 1967ರಲ್ಲಿ ಭಾರತ ಸರಕಾರದ ಸಂವಿಧಾನಕ್ಕೆ ಭಾರತೀಯ ಭಾಷೆಗಳನ್ನು ಸೇರಿಸಲು ನಿಯಮಾವಳಿಗಳನ್ನು ರೂಪಿಸಲಿಕ್ಕೆ ಅಶೋಕ್ ಪಾವಾ ಸಮಿತಿಯನ್ನು ನೇಮಕಾತಿ ಮಾಡಿತು.
ಈ ಸಮಿತಿಯ ಅಭಿಪ್ರಾಯದಂತೆ, ಯಾವುದೇ ಭಾಷೆಯು ಸಂವಿಧಾನಕ್ಕೆ ಸೇರ್ಪಡೆಯಾಗುವುದಿದ್ದರೆ ಅದು
(1) ಒಂದು ರಾಜ್ಯದ ಆಡಳಿತ ಭಾಷೆಯಾಗಿರಬೇಕು. (2) ಬಹಳಷ್ಟು ಜನರು ಈ ಭಾಷೆಯಲ್ಲಿ ವ್ಯವಹರಿಸಬೇಕು. (3) ಅದು ಸ್ವತಂತ್ರ ಭಾಷೆಯಾಗಿರಬೇಕು, ಉಪಭಾಷೆಯಾಗಿರಬಾರದು. (4) ಸಾಹಿತ್ಯ ಅಕಾಡಮಿ ಈ ಭಾಷೆಯನ್ನು ಅಧಿಕೃತವಾಗಿ ಗುರುತಿಸಬೇಕು ಮತ್ತು (5) ಈ ಭಾಷೆಗೆ ಇದರದ್ದೇ ಆದ ಸಾಹಿತ್ಯ ಪರಂಪರೆ ಇರಬೇಕು. 2004ರಲ್ಲಿ ಈ ನಿಯಮಾವಳಿಗಳು ಬದಲಾದವು. ಹೊಸ ನಿಯಮಾವಳಿಗಳ ಪ್ರಕಾರ, ಸಂವಿಧಾನಕ್ಕೆ ಸೇರಲು ಯಾವುದೇ ಭಾಷೆ ಕೂಡಾ (1) ಕಡಿಮೆ ಪಕ್ಷ ಒಂದು ಲಕ್ಷ ಭಾರತೀಯ ಪ್ರಜೆಗಳ ಮಾತೃ ಭಾಷೆಯಾಗಿರಬೇಕು. (2) ಶಾಲೆಗಳಲ್ಲಿ ಈ ಭಾಷೆ ಕಲಿಸುತ್ತಿರಬೇಕು ಮತ್ತು (3) ಸಾಹಿತ್ಯ ಅಕಾಡಮಿಯ ಅಧಿಕೃತ ಪಟ್ಟಿಯಲ್ಲಿರಬೇಕು. 2009ರಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯಮಂತ್ರಿ ಮುಳ್ಳಪಳ್ಳಿ ರಾಮಚಂದ್ರನ್ ಸಂಸತ್ತಿನಲ್ಲಿ ಈ ಪ್ರಶ್ನೆಯ ಬಗ್ಗೆ ಉತ್ತರಿಸುತ್ತಾ ಹೇಳಿದ್ದಿಷ್ಟು: ‘‘ನಿಯಮಾವಳಿಗಳ ಪ್ರಕಾರ ಕೇಂದ್ರ ಸರಕಾರ ಭಾರತೀಯ ಭಾಷೆಗಳಿಗೆ ಮನ್ನಣೆ ನೀಡಲು ಸಿದ್ಧ. ಯಾವುದೇ ಭಾರತೀಯ ಭಾಷೆ ಉಪಭಾಷೆಯಾಗಿರದೆ ಸ್ವತಂತ್ರ ಭಾಷೆಯಾಗಿದ್ದರೆ ಅದು ಸಂವಿಧಾನದ ಮನ್ನಣೆ ಗಳಿಸುವಲ್ಲಿ ಅರ್ಹವಾಗುತ್ತದೆ.’’
ತುಳು ಭಾಷೆ ಸ್ವತಂತ್ರ ಭಾಷೆಯೆಂದು ಎಲ್ಲರೂ ಒಪ್ಪುತ್ತಾರೆ. ಕಡಿಮೆ ಎಂದರೂ ಅರ್ಧ ಕೋಟಿ ಜನರು ತುಳುವನ್ನು ಮಾತೃ ಭಾಷೆಯಾಗಿ ಸ್ವೀಕರಿಸಿದ್ದಾರೆ. ತುಳು ಭಾಷೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ತನ್ನ ಹಿರಿಮೆಯನ್ನು ಸಾಧಿಸಿದೆ. ಆದರೂ, ತುಳು ಭಾಷೆ ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಲು ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ. ಅವಿಭಜಿತ ದಕ್ಷಿಣ ಕನ್ನಡ ಇದುವರೆಗೆ ತುಳು ಮಾತೃ ಭಾಷೆಯಾಗಿರುವ ಇಬ್ಬರು ಕರ್ನಾಟಕದ ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಭಾಗದ ಅನೇಕ ಸಂಸದರು ಕೇಂದ್ರ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ದುರದೃಷ್ಟವಶಾತ್, ಈ ಮಂತ್ರಿಗಳಾಗಲಿ, ಸಂಸದರಾಗಲಿ ಇದುವರೆಗೆ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಯಾವುದೇ ಆಸಕ್ತಿ ತೋರಿಸಿಲ್ಲ.
ಕಾಲಕಾಲಕ್ಕೆ ಇದರ ಬಗ್ಗೆ ಪೂರಕವಾಗಿ ಹೇಳಿಕೆ ನೀಡುತ್ತಾ ಬಂದಿದ್ದಾರೆ ಅಷ್ಟೆ. ತುಳುವನ್ನು ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಕುರಿತು ನಮ್ಮ ರಾಜಕಾರಣಿಗಳಲ್ಲಿ ನಿಖರವಾದ ಯಾವುದೇ ಕಾರ್ಯಸೂಚಿ ಇಲ್ಲ. ಅವರಲ್ಲಿ ಈ ವಿಷಯದ ಬಗ್ಗೆ ಕೇಳಿದರೆ, ಆಗಬೇಕೆಂದು ತಲೆಯಾಡಿಸುತ್ತಾರೆ. ಮುಂದಿನ ಘಳಿಗೆಯಲ್ಲಿ ಅದನ್ನು ಮರೆತು ಬಿಡುತ್ತಾರೆ. ರಾಜಕಾರಣಿಗಳ ಅನಾಸಕ್ತಿಗೆ ಮುಖ್ಯ ಕಾರಣ ತುಳು ಭಾಷೆ ಎಂದಿಗೂ ಚುನಾವಣೆಯ ವಿಷಯ (Election Issue)ವಾಗಿ ಮೂಡಿ ಬಂದಿಲ್ಲ. ಆದುದರಿಂದ ತುಳು ಭಾಷೆ ಉಳಿಸಲು, ಬೆಳೆಸಲು, ತುಳು ಭಾಷಾ ಪ್ರೇಮಿಗಳು ಹೊಸ ಕಾರ್ಯತಂತ್ರಗಳನ್ನು ರೂಪಿಸುವ ಕಾಲ ಸನ್ನಿಹಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂಸತ್ತಾಗಲಿ, ಶಾಸನ ಸಭೆಯಾಗಲಿ, ಜನಾಭಿಪ್ರಾಯದ ಧ್ಯೋತಕವಾಗಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಪ್ರತೀ ತುಳು ಭಾಷಿಗನು/ಳು ಉಮೇದ್ವಾರರಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ನಿಮ್ಮ ಕಾರ್ಯಸೂಚಿಯೇನೆಂದು ನೇರವಾಗಿ, ದಿಟ್ಟವಾಗಿ ಪ್ರಶ್ನಿಸಬೇಕು.
ಈ ವಿಷಯದ ಬಗ್ಗೆ ಬದ್ಧತೆ (commitment)ತೋರಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಮಾತ್ರವಲ್ಲದೆ, ಅವರನ್ನು ಆಗಿಂದಾಗ್ಗೆ ಎಚ್ಚರಿಸುತ್ತಿರಬೇಕು. ಪಣಿಯಾಡಿ, ಕಿಲ್ಲೆಯವರಿಂದ ಹಿಡಿದು, ಕಯ್ಯಿರ, ವಿವೇಕ ರೈಗಳವರೆಗೆ ನಮ್ಮ ಹಿರಿಯರು ತುಳು ಭಾಷೆಗಾಗಿ ದುಡಿದಿದ್ದಾರೆ. ಇವರೆಲ್ಲರ ಪ್ರಯತ್ನ ವ್ಯರ್ಥವಾಗದಂತೆ ಮುಂದುವರಿಸುವ ಜವಾಬ್ದಾರಿ ನಮ್ಮ ತಲೆಮಾರಿನ ಮೇಲಿದೆ. ಜಾಗತೀಕರಣದ ಈ ಸಂದರ್ಭದಲ್ಲಿ ಜಗತ್ತಿನ ಅನೇಕ ಭಾಷೆಗಳು ಅಳಿಯುತ್ತಿವೆ, ಇನ್ನು ಕೆಲವು ಅಳಿವಿನ ಅಂಚಿನಲ್ಲಿವೆ. ಯುನೆಸ್ಕೊ ಮಾಪನದ ಪ್ರಕಾರ, ತುಳು ಭಾಷೆ ದುರ್ಬಲ (ಡ್ಠ್ಝ್ಞಛ್ಟಿಚ್ಝಿಛಿ
) ಭಾಷೆಗಳ ಪಟ್ಟಿಯಲ್ಲಿದೆ. ಇದರ ಅರ್ಥ ತುಳು ಇನ್ನು ಕೆಲವು ದಶಕಗಳಲ್ಲಿ ನಶಿಸಬಹುದೆಂದಲ್ಲ. ಯುನೆಸ್ಕೊ ಪಟ್ಟಿ ತುಳು ಭಾಷೆಗೆ ರಾಜಕೀಯ ಹಾಗೂ ಸಾಂವಿಧಾನಿಕ ಪೋಷಣೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ವರ್ತಮಾನದಲ್ಲಿ ತುಳು ಭಾಷೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿಲ್ಲ ನಿಜ. ಆದರೆ, ಸಾಂವಿಧಾನಿಕ ಮನ್ನಣೆಯಿಂದ ಹಾಗೂ ಶಿಕ್ಷಣ ಮಾಧ್ಯಮದಿಂದ ವಂಚಿತವಾದ ತುಳು ಭಾಷೆಯ ಸ್ಥಿತಿಗತಿ ಇನ್ನು ನೂರು ವರ್ಷಗಳ ನಂತರ ಹೇಗಿರಬಹುದು? ಇದನ್ನು ಯೋಚಿಸಿದರೆ ಭಯವಾಗುತ್ತದೆ. ಕೊನೆಯ ಮಾತು:ನೇಪಾಳ ದೇಶದಲ್ಲಿ 78 ವರ್ಷದ ಗ್ಯಾನಿ ಮಾಯಿ ಸೇನ್ ಎಂಬ ವೃದ್ಧೆಯನ್ನು ನೋಡಲು ಜಗತ್ತಿನಾದ್ಯಂತ ಭಾಷಾ ವಿಜ್ಞಾನಿಗಳು ಸಾಲುಗಟ್ಟಿ ಬರುತ್ತಿದ್ದಾರೆ.
ಯಾಕೆಂದರೆ, ಕುಸುಂದಾ ಎಂಬ ಅಪೂರ್ವ ಭಾಷೆಯನ್ನು ಮಾತನಾಡುವ ಈಕೆಯೊಬ್ಬಳೇ ಇಂದು ಬದುಕಿ ಉಳಿದಿದ್ದಾಳೆ. ಆಕೆಯೊಂದಿಗೆ ಅವಳ ಭಾಷೆಯೂ ಅವಸಾನ ಹೊಂದಲಿದೆ. ದೂರದ ಅಮೆರಿಕದಲ್ಲಿದ್ದ ರೆಡ್ ಇಂಡಿಯನ್ ಮಹಿಳೆಯೊಬ್ಬಳಿಗೆ ಗೊತ್ತಿದ್ದದ್ದು ಕಲುಸಾ ಎಂಬ ಹೆಸರಿನ ಅವಳ ಮಾತೃ ಭಾಷೆ ಮಾತ್ರ. ಮಕ್ಕಳಿಲ್ಲದ ಈಕೆ ಗಂಡನನ್ನು ಕಳೆದುಕೊಂಡ ನಂತರ ಸುಮಾರು ಇಪ್ಪತ್ತು ವರ್ಷಗಳಷ್ಟು ಕಾಲ ಸಾಯುವವರೆಗೆ ಮೂಕಳಾಗಿ ಜೀವನ ಕಳೆದಳು. ಯಾಕೆಂದರೆ, ಅವರ ಭಾಷೆಯಲ್ಲಿ ಮಾತನಾಡುವ ಅನ್ಯ ವ್ಯಕ್ತಿಗಳು ಯಾರೂ ಉಳಿದಿರಲಿಲ್ಲ! ಆಕೆಯೊಂದಿಗೆ, ಆಕೆಯ ಭಾಷೆ-ಸಂಸ್ಕೃತಿ ಕೂಡ ಕಾಲಗರ್ಭ ಸೇರಿತು.
ತುಳುವರಿಗೆ ಕಾರ್ಯ ಪ್ರವೃತ್ತರಾಗಲು ಈ ದುರಂತ ಕಥಾನಕಗಳು ಪ್ರೇರಣೆ ನೀಡಲು ಸಾಧ್ಯವೇ? (ದಿನಾಂಕ 1/8/2015 ರಂದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ ಮತ್ತು ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ ತುಳು ಗೋಷ್ಠಿಯಲ್ಲಿ ನಾನು ಮಾಡಿದ ಆಶಯ ಭಾಷಣವನ್ನು ಆಧರಿಸಿ, ಈ ಲೇಖನವನ್ನು ಸಿದ್ಧಪಡಿಸಲಾಗಿದೆ.)







