ಸಾವಿರ ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕೇಂದ್ರದ ಜೊತೆ ಒಪ್ಪಂದ

ಬೆಂಗಳೂರು, ಜೂ.29: ರಾಜ್ಯದ 24 ತಾಲೂಕು ಗಳಲ್ಲಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿ ಸಲು ರಾಜ್ಯ ಸರಕಾರ, ಕೇಂದ್ರ ಸರಕಾರದ ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಪ್ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿದೆ.
ವಿಧಾನಸೌಧದಲ್ಲಿ ಬುಧವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಂಸ್ಥೆಯ ಅಧಿಕಾರಿ ಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ ಮಾತನಾಡಿ, ಕೇಂದ್ರ ಸರಕಾರದ ವಿಜಿಎಫ್ ಯೋಜನೆ ಮೂಲಕ ಇದು ಅನುಷ್ಠಾನಗೊಳ್ಳುತ್ತಿದ್ದು, ಮುಂದಿನ 25 ವರ್ಷಗಳವರೆಗೆ ಕೇವಲ 4.50 ರೂ.ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ತಾಲೂಕುಗಳಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಸಹಯೋಗದಲ್ಲಿ ಪ್ರತಿ ತಾಲೂಕಿನಲ್ಲಿ ಸೋಲಾರ್ ಘಟಕ ತೆರೆಯುವ ಯೋಜನೆ ರೂಪಿಸಲಾಗಿದೆ. ತಾಲೂಕಿಗೆ ಅಗತ್ಯವಿರುವ ವಿದ್ಯುತ್ ಅಲ್ಲೇ ಉತ್ಪಾದಿಸಲಾಗುತ್ತದೆ. ವಿಜಿಎಫ್ ಅನುದಾನದ ಯೋಜನೆಯಲ್ಲಿ 60 ತಾಲೂಕು ಗಳನ್ನು ಗುರುತಿಸಿದ್ದು, 1000 ಮೆ.ವ್ಯಾ. ಉತ್ಪಾದಿಸಲು ಉದ್ದೇಶಿಸಲಾಗಿದೆ. ಎಸ್‌ಇಸಿಐ 24 ತಾಲೂಕುಗಳಲ್ಲಿ 14 ತಿಂಗಳಲ್ಲಿ 970 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಿದೆ. ಈಗಾಗಲೇ ಇರುವ ಮೂಲಸೌಕರ್ಯ ಬಳಸಿಕೊಂಡು ಉತ್ಪಾದನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಸ್ಕಾಂಗೆ 480ಮೆ.ವ್ಯಾ., ಜೆಸ್ಕಾಂಗೆ 120 ಮೆ.ವ್ಯಾ., ಎಸ್ಕಾಂಗೆ 180 ಮೆ.ವ್ಯಾ., ಮೆಸ್ಕಾಂಗೆ 80 ಮೆ.ವ್ಯಾ. , ಚೆಸ್ಕಾಂಗೆ 110 ಮೆ.ವ್ಯಾ. ಹಂಚಿಕೆ ಮಾಡಲಾಗುವುದು. ಯೋಜನೆಗೆ ಒಟ್ಟು 5000 ಕೋಟಿ ರು. ಖರ್ಚಾಗಲಿದ್ದು , ಒಂದು ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ 50 ಲಕ್ಷರೂ..ನಿಂದ 1 ಕೋಟಿ ರೂ.. ವೆಚ್ಚವಾಗಲಿದೆ. ಕೇಂದ್ರ ಸರಕಾರ ಪ್ರತಿ ಮೆ.ವ್ಯಾ. ಉತ್ಪಾದನೆಗೆ ಸುಮಾರು 73 ಲಕ್ಷ ರು. ಸಹಾಯಧನ ನೀಡಲಿದೆ. ಕೇಂದ್ರದಿಂದ ಒಟ್ಟು ಯೋಜನೆಗೆ 730 ಕೋಟಿ ರೂ.. ಸಹಾಯಧನ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.





