ಕೆಎಸ್ಸಾರ್ಟಿಸಿ ನೌಕರರಿಗೆ ಶೇ.8ರಷ್ಟು ವೇತನ ಹೆಚ್ಚಳ

ಸಚಿವ ಸಂಪುಟ ಸಭೆ ನಿರ್ಧಾರ
ಬೆಂಗಳೂರು, ಜೂ.29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸೇರಿದಂತೆ ನಾಲ್ಕು ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಶೇ.8ರಷ್ಟು ವೇತನ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಹಲವು ವರ್ಷಗಳಿಂದ ವೇತನ ಹೆಚ್ಚಳದ ಬೇಡಿಕೆಯು ಸರಕಾರದ ಮುಂದಿತ್ತು. ಈ ಹಿನ್ನೆಲೆಯಲ್ಲಿ ಮೂಲವೇತನಕ್ಕೆ ಸರಿಹೊಂದುವಂತೆ ಶೇ.8ರಷ್ಟು ವೇತನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಾಯವ್ಯ ರಾಜ್ಯ ಸಾರಿಗೆ ಸಂಸ್ಥೆಗೆ ಸುಮಾರು 2257 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು. ಈ ಹುದ್ದೆಗಳ ನೇಮಕಾತಿಗೆ 2013ರಲ್ಲಿಯೆ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಸಚಿವ ಜಯಚಂದ್ರ ತಿಳಿಸಿದರು.
ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ಹೆಚ್ಚುವರಿಯಾಗಿ ಒಂದು ಸಾವಿರ ಹೊಸ ಬಸ್‌ಗಳ ಖರೀದಿಗೆ ಬ್ಯಾಂಕುಗಳಿಂದ 388 ಕೋಟಿ ರೂ.ಸಾಲ ಪಡೆಯಲು ಒಂದು ಬಾರಿ ಸರಕಾರದ ವತಿಯಿಂದ 152.99 ಕೋಟಿ ರೂ.ಬಡ್ಡಿ ಸಹಾಯಧನ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಿನ ಸುಮಾರು 56 ಕಿಮೀ ವ್ಯಾಪ್ತಿಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮತ್ತೆ ಜೀವಬಂದಿದೆ. ಸುಮಾರು 1976ರಲ್ಲಿ ಈ ರಸ್ತೆ ನಿರ್ಮಿಸುವ ಸಲುವಾಗಿ ಸುಮಾರು 1980 ಎಕರೆಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ರಸ್ತೆ ನಿರ್ಮಾಣದ ವೆಚ್ಚ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಈಗ ಸರಕಾರದ ವೆಚ್ಚವಿಲ್ಲದೆ ರಸ್ತೆ ನಿರ್ಮಾಣದ ಕುರಿತು ಯೋಜನೆ ರೂಪಿಸಲಾಗಿದೆ. ಇದನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸದರಿ ಕಟ್ಟಡದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
2016-17ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಆನೆ ಕಾರಿಡಾರ್‌ಗಳನ್ನು ಪುನರ್ ಸ್ಥಾಪಿಸುವ ದೃಷ್ಟಿಯಿಂದ ಸರಕಾರದ ವತಿಯಿಂದ ಅರಣ್ಯದಲ್ಲಿರುವ ಖಾಸಗಿ ಜಮೀನುಗಳನ್ನು ಖರೀದಿಸಲು ಹಣ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ದಾವಣಗೆರೆ ತಾಲೂಕಿನಲ್ಲಿರುವ ಸರ್ವೇ ನಂ.23ರಲ್ಲಿರುವ 4.08ಗುಂಟೆ ಜಮೀನನ್ನು ಕನಕ ಗುರು ಪೀಠಕ್ಕೆ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-01 ಮತ್ತು 2ರಡಿ ನಿರ್ಮಿಸಲಾಗಿರುವ 106 ಪುನರ್ ವಸತಿ ಕೇಂದ್ರಗಳಲ್ಲಿನ ಬಾಕಿಯಿರುವ ಕಾಮಗಾರಿಗಳಿಗೆ ಅವಶ್ಯವಿರುವ 191.50ಕೋಟಿ ರೂ. ನಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಒದಗಿಸಿ, ಪುನರ್ ವಸತಿ ಕೇಂದ್ರಗಳನ್ನು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.





