2018ರ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ಆಚರಿಸಲು ಸರಕಾರ ಸಂಕಲ್ಪ: ಸಚಿವ ಮಂಜು

ಬೆಂಗಳೂರು, ಜೂ.29: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ‘ಜೈನ ಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ಶ್ರವಣಬೆಳಗೊಳದಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ನಡೆಯುವ ‘ಮಹಾಮಸ್ತಕಾಭಿಷೇಕ’ ಸಮಾರಂಭವು 2018ರ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಇಂದಿಲ್ಲಿ ಪ್ರಕಟಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಮಹಾಮಸ್ತಾಕಾಭಿಷೇಕ ಸಮಾರಂಭದ ಉನ್ನತಾಧಿಕಾರ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಈ ಸಮಾರಂಭವನ್ನು ಈ ಹಿಂದಿಗಿಂತಲೂ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರಕಾರ ದೃಢಸಂಕಲ್ಪ ಮಾಡಿದೆ ಎಂದು ಹೇಳಿದರು.
ಕಳೆದ ಬಾರಿಗಿಂತಲೂ ಈ ಬಾರಿ ಎಲ್ಲ್ಲ ರೀತಿಯಲ್ಲೂ ಬಹಳಷ್ಟು ಬದಲಾವಣೆ ಹಾಗೂ ಬೆಳವಣಿಗೆಗಳಾಗಿವೆ. ಭಕ್ತ ಸಮೂಹಕ್ಕೆ ಹಾಗೂ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ವಸತಿ ಹಾಗೂ ಶೌಚಾಲಯ ವ್ಯವಸ್ಥೆ, ನಿರಂತರ ವಾಹನ ಸೌಲಭ್ಯ, ಅತ್ಯುತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಹಾಗೂ ಸೂಕ್ತ ಭದ್ರತಾ ಸೌಲಭ್ಯಗಳನ್ನು ಒದಗಿಸಿ ಅಂತಾರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮವನ್ನು ಸ್ಮರಣಾರ್ಹ ಕಾರ್ಯಕ್ರಮವನ್ನಾಗಿ ರೂಪಿಸಬೇಕೆಂಬುದು ಸರಕಾರದ ಸದಾಶಯ ಎಂದರು.
575 ಕೋಟಿ ರೂ. ವೆಚ್ಚ: 2006ರಲ್ಲಿ ಆಚರಿಸಿದ ಮಹಾಮಸ್ತಕಾಭಿಷೇಕಕ್ಕೆ 116.66 ಕೋಟಿ ರೂ ವೆಚ್ಚ ಮಾಡಲಾಗಿತ್ತು. ಇದೀಗ 2018ರ ಮಹಾಮಸ್ತಕಾಭಿಷೇಕಕ್ಕೆ 575ಕೋಟಿ ರೂ. ಮೊತ್ತದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹತ್ತು-ದಿನಗಳ ಈ ಸಮಾರಂಭಲ್ಲಿ 40ಲಕ್ಷದಿಂದ 50ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಂಜು ಮಾಹಿತಿ ನೀಡಿದರು.
ದೇಶ-ವಿದೇಶಗಳಿಂದಲೂ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ರಸ್ತೆಗಳ ಸುಧಾರಣೆ ಕಾಮಗಾರಿಗಳು ಎಲ್ಲವೂ ಈ ಅಂದಾಜು ಪಟ್ಟಿಯಲ್ಲಿ ಸೇರಿವೆ. ಕಳೆದ ಮಹಾಮಸ್ತಕಾಭಿಷೇಕದ ವೇಳೆ 400 ಎಕರೆ ಪ್ರದೇಶದಲ್ಲಿ 12 ಸಾವಿರ ಮಂದಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ 710 ಎಕರೆ ಪ್ರದೇಶದಲ್ಲಿ ಕನಿಷ್ಠ 25 ಸಾವಿರ ಜನರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶ್ರವಣಬೆಳಗೊಳ ರೈಲ್ವೆ ನಿಲ್ದಾಣದ ಬಳಿ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸುವತ್ತ ಹಾಗೂ ಸಣ್ಣ ನೀರಾವರಿ ಇಲಾಖೆಯ ಮೂಲಕ ಹೊಸಳ್ಳಿ ಹಾಗೂ ಉತ್ತೇನಳ್ಳಿ ಕೆರೆಗಳ ಪುನುರುಜ್ಜೀವನ ಮಾಡಿ ಸುಂದರೀಕರಣಗೊಳಿಸುವತ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಜೈನ ಸಮುದಾಯದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಶ್ರವಣಬೆಳಗೊಳದ ವಿಂದ್ಯಗಿರಿ ಬೆಟ್ಟದ ಮೇಲಿನ ಗೊಮ್ಮಟೇಶ್ವರ ಮೂರ್ತಿ ದರ್ಶನಕ್ಕೆ ‘ರೋಪ್‌ವೇ’ ಅಳವಡಿಸಲು ಪ್ರಾಚ್ಯವಸ್ತು ಇಲಾಖೆಗೆ ಅನುಮತಿ ಕೋರಲಾಗಿದೆ. ಮೆಟ್ಟಿಲುಗಳ ಅಗಲೀಕರಣ ಕಾಮಗಾರಿ ಶೀಘ್ರದಲ್ಲೆ ಆರಂಭಿಸಲಾಗುವುದು’
-ಎ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ







