ಡಬ್ಬಿಂಗ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ
ಬೆಂಗಳೂರು, ಜೂ.29: ಹಿಂದಿ ಸಿನೆಮಾ ‘ಮೈ ಹಸ್ಬೆಂಡ್ಸ್ ವೈಫ್ಸ್’ನ ಕನ್ನಡ ಡಬ್ಬಿಂಗ್ ಚಿತ್ರವಾದ ನಾನು ಮತ್ತು ನನ್ನ ಪ್ರೀತಿ ಚಿತ್ರದ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಗೆ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಲು ನಿರ್ಮಾಪಕ ಕೆ.ದರ್ಶನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ದರ್ಶನ್ ಎಂಟರ್ ಪ್ರೈಸಸ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠ. ಚಿತ್ರ ಬಿಡುಗಡೆಯ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ‘ಮೈ ಹಸ್ಬೆಂಡ್ಸ್ ವೈಫ್ಸ್ ’ ಹಿಂದಿ ಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ, ಬಿಡುಗಡೆ ಮಾಡಲು ತಯಾರಿ ನಡೆಸಿದಾಗ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ, ಸಿನೆಮಾದ ಬಿಡುಗಡೆಗೆ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು. ಹಿನ್ನೆಲೆ: ಮೈ ಹಸ್ಬಂಡ್ಸ್ ವೈಪ್ ಹಿಂದಿ ಚಿತ್ರದ ಡಬ್ಬಿಂಗ್ ಹಕ್ಕಿನ ರೈಟ್‌ನ್ನು ದರ್ಶನ್ ಎಂಟರ್ ಪ್ರೈಸಸ್ ಪಡೆದಿದೆ. ಈ ಚಿತ್ರವನ್ನು ಕನ್ನಡದಲ್ಲಿ ನಾನು, ನನ್ನ ಪ್ರೀತಿ ಟೈಟಲ್ ಅಡಿಯಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾಡಲಾಗಿದೆ.





