ಸಂವಿಧಾನದ ಚೌಕಟ್ಟಿನಡಿ‘ತ್ರಿವಳಿ ತಲಾಖ್’
ಪರಿಶೀಲನೆಗೆ ಸುಪ್ರೀಂ ಒಲವು
ಹೊಸದಿಲ್ಲಿ, ಜು.29: ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಖ್ ಮೂಲಕ ನಡೆಸಲಾಗುವ ವಿವಾಹ ವಿಚ್ಛೇದನವು, ಒಂದು ಬೃಹತ್ ಜನಸಮೂಹದ ಮೇಲೆ ಪರಿಣಾಮ ಬೀರುವ ಮುಖ್ಯ ವಿಷಯವಾಗಿದೆ. ಹೀಗಾಗಿ ಅದನ್ನು ಸಂವಿಧಾನದ ಚೌಕಟ್ಟಿನ ತಳಹದಿಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಿಸಿದೆ.
ವೈಯಕ್ತಿಕ ಕಾನೂನಿಗೆ ಸಂಬಂಧಿಸಿ ವಿಷಯಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿ ಎ.ಎ. ಖಾನ್‌ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಸಮ್ಮತಿಸಿದೆ. ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ಎರಡೂ ಕಡೆಗಳು ಬಲವಾದ ವಾದಗಳನ್ನು ಮಂಡಿಸಿರುವುದರಿಂದ ನೇರವಾಗಿ ಯಾವುದೇ ತೀರ್ಮಾನಕ್ಕೆ ಬರಲು ತನಗೆ ಸಾಧ್ಯವಿಲ್ಲವೆಂದು ಅದು ಹೇಳಿದೆ. ಈ ಬಗ್ಗೆ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪಿನಲ್ಲಿ ಯಾವುದಾದರೂ ಲೋಪದೋಷಗಳಿರುವುದೇ ಎಂಬುದನ್ನು ತಾನು ಪರಿಶೀಲಿಸುವೆ ಹಾಗೂ ಈ ವಿಷಯವನ್ನು ವಿಸ್ತೃತ ಪೀಠ ಅಥವಾ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಬಗ್ಗೆ ತಾನು ನಿರ್ಧಾರವೊಂದನ್ನು ಕೈಗೊಳ್ಳುವುದಾಗಿ ತಿಳಿಸಿದೆ. ಆಲಿಕೆಯ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಇಂದಿರಾ ಜೈ ಸಿಂಗ್ ಅವರು, ವೈಯಕ್ತಿಕ ಕಾನೂನನ್ನು ಮೂಲಭೂತ ಹಕ್ಕೆಂದು ಪರಿಗಣಿಸಲು ಸಾಧ್ಯವಿಲ್ಲವೆಂಬ ಬಾಂಬೆ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿರುವುದನ್ನು ಪ್ರಸ್ತಾಪಿಸಿದರು.
ವೈಯಕ್ತಿಕ ಕಾನೂನಿನ ಬಗ್ಗೆ ಯಾರೂ ಕೂಡಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಹಾಗೂ ಚರ್ಚೆಯಲ್ಲಿ ಭಾಗವಹಿಸಬಹುದು ಎಂದು ನ್ಯಾಯಪೀಠ ತಿಳಿಸಿತು.
ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ವಿರೋಧಿಸಿ ಸಲ್ಲಿಸಲಾದ ನಾಲ್ಕು ಅರ್ಜಿಗಳ ಆಲಿಕೆಯನ್ನು ಸುಪ್ರೀಂಕೋರ್ಟ್ ಇಂದು ಏಕಕಾಲಕ್ಕೆ ನಡೆಸಿತು. ಈ ವಿಷಯಕ್ಕೆ ಸಂಬಂಧಿಸಿ ಆರು ವಾರಗಳೊಳಗೆ ತನ್ನ ಅಭಿಪ್ರಾಯ ತಿಳಿಸುವಂತೆ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿದೆ.





