ಮಧ್ಯವರ್ತಿಗಳ ಅಮಾನವೀಯ ವರ್ತನೆ
ಮಾನ್ಯರೆ,
ಮತ್ತೆ ಮುಂಗಾರು ಶುರುವಾಯ್ತು. ಹೊಲವನ್ನು ಹದಗೊಳಸಿ, ಆಕಾಶ ದಿಟ್ಟಿಸುತ್ತಿದ್ದ ರೈತನ ಮುಖದಲ್ಲಿ ಮತ್ತೆ ಈಗ ಜೀವ ಕಳೆ ತುಂಬಿದೆ. ಬಿತ್ತನೆ ಬೀಜ, ಗೊಬ್ಬರಕ್ಕೆ ಹಣ ಹೊಂದಿಸುವ ಚಿಂತೆ ಒಂದೇ ಸಮನೆ ಕಾಡುತ್ತಿದೆ. ಸಾಲ, ಬೆಳೆ ಸಾಲದ ನಿರೀಕ್ಷೆಯಲ್ಲಿ ಬ್ಯಾಂಕುಗಳತ್ತ ಮುಖ ಮಾಡುವ ರೈತ ಹತಾಶನಾಗಿ ಹೊರಗೆ ಬರುತ್ತಾನೆ. ಅಲ್ಲೀಗ ಎಲ್ಲ್ಲ ವ್ಯವಹಾರಗಳು ಮಧ್ಯವರ್ತಿಗಳ ಕೈಮೇಲೆ ನಡೆಯುತ್ತವೆ. ಕಪ್ಪು ಮೋಡ ಕರಗಿ ಮಳೆ ಸುರಿದಾಗ ಹೆಚ್ಚು ಖುಷಿಗೊಂಡಿದ್ದು ಈ ಮಧ್ಯವರ್ತಿಗಳೇ ಬ್ಯಾಂಕುಗಳ ಮೂಲ ಆಶಯ ಈ ಮಧ್ಯವರ್ತಿಗಳಿಂದ ಗಬ್ಬೆದ್ದಿದೆ.
ವರ್ಷಪೂರ್ತಿ ಬಿಸಿಲಿಗೆ ಬೆಂದು ಬರಿಗೈಯಲ್ಲಿರುವ ರೈತನ ಸ್ಥಿತಿ, ಅವರ ಅಮಾನವೀಯ ವರ್ತನಗೆ ಇನ್ನಷ್ಟು ಪ್ರೋತ್ಸಾಹ ಕೊಡುತ್ತದೆ. ಇದೇ ಮಧ್ಯವರ್ತಿಗಳ ಜೊತೆ ಒಳಹೋದರೆ ಮ್ಯಾನೇಜರ್ ಮುಖ ಅರಳುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಅವರ ಗೆಲುವಿನಲ್ಲಿ ರೈತ ನಗೆ ಪಾಟಲಿಗೀಡಾಗಿದ್ದಾನೆ. ದಿನೇ ದಿನೇ ಇವರ ಹಾವಳಿ ಮತ್ತು ಪರಿಣಾಮ ಹೆಚ್ಚುತ್ತಿವೆ. ಮಧ್ಯವರ್ತಿಗಳಿಗೆ ನೀಡುವ ಕಮಿಶನ್‌ನಲ್ಲಿ ಮನೆಮಂದಿ ಒಂದು ತಿಂಗಳಾದರೂ ಸರಿಯಾಗಿ ಊಟ ಮಾಡಬಹುದು. ಬ್ಯಾಂಕ್ ಸಾಲ, ಬಡ್ಡಿ, ಅಕಾಲಕ್ಕೆ ಬಾರದ ಮಳೆ ಮತ್ತು ಇವರ ಕಮಿಶನ್ ರೈತನಿಗೆ ಹೊರಲಾಗದ ಹೊರೆಯಂತಾಗುತ್ತದೆ. ಕೊನೆಗೆ ಆತ್ಮಹತ್ಯೆಯಂತಹ ಆಲೋಚನೆಗಳು ಮಿಸುಕಾಡುತ್ತವೆ.





