ವಿಂಬಲ್ಡನ್ ಶ್ರೇಷ್ಠರ ಮನಸ್ಸು ಗೆದ್ದ ಮೇಡ್ ಇನ್ ಇಂಡಿಯಾ ಟವೆಲ್

ವಿಂಬಲ್ಡನ್, ಜೂ.30: ಬಹುಶಃ ಹತ್ತು ಕೋಟಿ ಡಾಲರ್ ಬಹುಮಾನದ ತಡೆಯನ್ನು ಮುರಿಯುವ ಮೊಟ್ಟಮೊದಲ ಆಟಗಾರ ನೊವಾಕ್ ಜೋಕೊವಿಕ್. ಆದರೆ ಈ ಕಣ್ಣುಕುಕ್ಕುವ ಶ್ರೀಮಂತಿಕೆ ಕೂಡಾ ಅವರನ್ನು ವಿಂಬಲ್ಡನ್ ಟವೆಲ್ ಅಪೇಕ್ಷಿಸುವ ಚಟ ಬಿಡಿಸಿಲ್ಲ.
ಈ ವಿಂಬಲ್ಡನ್ ಟವೆಲ್ ಪುನರ್ ಬಳಕೆ ಮಾಡಲು ತೆಗೆದು ಇಟ್ಟುಕೊಳ್ಳುವವರಲ್ಲಿ ವಿಶ್ವದ ಅತ್ಯುತ್ಕೃಷ್ಟ ಆಟಗಾರ ಮೊದಲಿಗರೇನಲ್ಲ. 35 ಡಾಲರ್‌ಗೆ ಆಲ್ ಇಂಗ್ಲೆಂಡ್ ಕ್ಲಬ್ ಮಳಿಗೆಯಲ್ಲಿ ದೊರಕುವ ಈ ಟವೆಲ್ ಮೇಲೆ ಹಲವು ಆಟಗಾರರಿಗೆ ವಿಶೇಷ ಪ್ರೀತಿ. ನಾನು ಅಧಿಕ ಸೆಕೆ ಅಥವಾ ಬೆವರಿನ ಕಾರಣ ಹೇಳಿ ಆಗೊಮ್ಮೆ ಈಗೊಮ್ಮೆ ಹೆಚ್ಚುವರಿ ಟವೆಲ್ ಪಡೆಯಲು ಪ್ರಯತ್ನಿಸುತ್ತೇನೆ ಎಂದು ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಹೇಳುತ್ತಾರೆ. ಆಲ್ ಇಂಗ್ಲೆಂಡ್ ಕ್ಲಬ್ ನನ್ನನ್ನು ಈ ಕಾರಣಕ್ಕೆ ಕ್ಷಮಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಜೊಕೊವಿಕ್ ಹೇಳುತ್ತಾರೆ.
ರಪೆಲ್ ನಡಾಲ್ ಅವರನ್ನು ಕಳೆದ ವರ್ಷ ಸದೆಬಡಿದ ಜರ್ಮನಿಯ ಸ್ಟಾರ್ ಆಟಗಾರ ಡಸ್ಟಿನ್ ಬ್ರೌನ್ ಕೂಡಾ, ಆ ತುಡಿತವೇ ವಿಶಿಷ್ಟ ಎನ್ನುತ್ತಾರೆ. ಈ ಟವೆಲ್ ಉತ್ಪಾದಿಸುವ ಕ್ರಿಸ್ಟಿ ಕಂಪೆನಿ ರಾಣಿ ವಿಕ್ಟೋರಿಯಾ ಅವರಿಗೂ ಈ ಟವೆಲ್ ಪೂರೈಸಿದೆ. ಇದು ಎಲ್ಲಿ ತಯಾರಾಗುವುದು ಭಾರತದ ಗುಜರಾತ್‌ನಲ್ಲಿ ಎನ್ನುವುದು ಹೆಮ್ಮೆಯ ವಿಚಾರ.
2013ರಲ್ಲಿ ಕಂಪೆನಿ 99 ಸಾವಿರ ಟವೆಲ್ ಪೂರೈಸಿತ್ತು. ಟೂರ್ನಿಯ ಕೊನೆಗೆ ಉಳಿದ ಟವೆಲ್‌ಗಳನ್ನು ಟೂರ್ನಿಯ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ನೀಡಲಾಗುತ್ತದೆ. ಇದನ್ನು ಬಹಳಷ್ಟು ಮಂದಿ ಆಟಗಾರರು ಹಾಗೂ ಅಭಿಮಾನಿಗಳು ಇಷ್ಟಪಡುತ್ತಾರೆ ಎಂದು 1850ರಲ್ಲಿ ಆರಂಭವಾದ ಈ ಕಂಪೆನಿ ಹೇಳುತ್ತದೆ.
ಹಲವು ಮಂದಿ ಸ್ನೇಹಿತರು ಹಾಗೂ ಸಂಬಂಧಿಕರು, ಆ ಟವೆಲ್‌ನ್ನು ಮನೆಗೆ ತರುವಂತೆ ಕೋರುತ್ತಾರೆ ಎಂದು ಆಟಗಾರರು ಹೇಳುತ್ತಾರೆ. ಪ್ರತಿ ಬಾರಿ ನಾನು ಕೋರ್ಟ್‌ನಿಂದ ಹೊರ ಹೋಗುವಾಗಲೂ ಅಭಿಮಾನಿಗಳು ಟವೆಲ್ ಕೇಳುತ್ತಾರೆ. ಆದರೆ ನಾನು ಕ್ಷಮಿಸಿ, ಅದು ಈಗಾಗಲೇ ಬುಕ್ ಆಗಿದೆ ಎಂದು ಹೇಳುತ್ತೇನೆ ಎಂದು ಫ್ರಾನ್ಸ್‌ನ ಜೋ ವಿಲ್ಫ್ರೆಡ್ ತೊಂಗಾ ಹೇಳುತ್ತಾರೆ.







