ಛತ್ತೀಸ್‌ಗಢದಲ್ಲೊಬ್ಬ ಹರೇಕಳ ಹಾಜಬ್ಬ!
ಅಂಧ ಮಕ್ಕಳ ಬಾಳಿಗೆ ಬೆಳಕಾದ ರೈತ ಪ್ರಧಾನ್

ಛತ್ತೀಸಗಢದ ರಾಯಘಡ ಜಿಲ್ಲೆಯ ಸಣ್ಣ ಗ್ರಾಮದ ರೈತ ಸುಮಾರು 30 ಅಂಧ ಮಕ್ಕಳಿಗೆ ಉಚಿತ ವಸತಿ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. 56 ವರ್ಷದ ಬರುಣ್ ಕುಮಾರ್ ಪ್ರಧಾನ್ ಜಿಲ್ಲಾ ಕೇಂದ್ರದಿಂದ 27 ಕಿಮೀ ದೂರದ ಅಮ್ಲಿದ್ ಗ್ರಾಮದಲ್ಲಿ "ನೇತ್ರಹೀನ್ ಬಾಲ್ ವಿದ್ಯಾ ಮಂದಿರ್" (ಅಂಧ ಮಕ್ಕಳ ಶಾಲೆ) ನಡೆಸುತ್ತಾರೆ.
ಈ ಶಾಲೆಯು ಹಲವು ಅಂಧ ಮಕ್ಕಳ ಬಾಳನ್ನು ಬೆಳಗಿಸಿದೆ. ಇಲ್ಲಿ ಅವರಿಗೆ ಶಿಕ್ಷಣ ಮತ್ತು ಕ್ರೀಡೆಯ ಜೊತೆಗೆ ಉದ್ಯೋಗ ತರಬೇತಿಯನ್ನೂ ಕೊಡಲಾಗುತ್ತದೆ. ಯಾವುದೇ ಅಂಧ ಮಕ್ಕಳು ರಸ್ತೆಯಲ್ಲಿ ಭಿಕ್ಷೆ ಬೇಡಿ ದೌರ್ಜನ್ಯಕ್ಕೆ ಒಳಗಾಗಬಾರದು. ಸ್ವಾವಲಂಬಿಯಾಗಿ ಅವರು ಬದುಕಿ ಉತ್ತಮ ಭವಿಷ್ಯಹೊಂದಲು ಅವರಿಗೆ ನೆರವಾಗುತ್ತಿದ್ದೇನೆ ಎನ್ನುತ್ತಾರೆ ಪ್ರಧಾನ್. ಈ ಶಾಲೆ 2014ರಲ್ಲಿ ಆರಂಭವಾಗಿದ್ದು, ಈಗ ಕೋಣೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೊಸ ಶೈಕ್ಷಣಿಕ ವರ್ಷದಲ್ಲಿ 60 ಮಂದಿಗೆ ವಿದ್ಯಾಭ್ಯಾಸ ನೀಡಲು ಸಾಧ್ಯವಿದೆ. ಬಹಳಷ್ಟು ಮಂದಿ ನಮ್ಮಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛಿಸಿರುವುದಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನುತ್ತಾರೆ ಪ್ರಧಾನ್.
6ನೇ ತರಗತಿಯವರೆಗೆ ಇರುವ ಶಾಲೆಯಲ್ಲಿ ಐದು ಅಂಧ ಶಿಕ್ಷಕರು ಇದ್ದಾರೆ. ಇವರಲ್ಲಿ ದಂಪತಿಗಳಾದ ಜೈದೇವ್ ಸಾಹು ಮತ್ತು ಕಿರಣ್ ಸಾಹು ಕೂಡ ಇದ್ದಾರೆ. ಪ್ರಧಾನ್ ಅವರ 19 ವರ್ಷದ ಮಗಳು ಹಿಮಾನಿ ಶಾಲೆಯ ಪ್ರಾಂಶುಪಾಲೆ. ಕೆಲವು ಸಮಾನ ಮನಸ್ಕರು ಪ್ರಧಾನ್ ಅವರಿಗೆ ಈ ಶಾಲೆ ತೆರೆಯಲು ನೆರವಾಗಿದ್ದಾರೆ. ಆದರೆ ಸರ್ಕಾರದ ಅನುದಾನ ಇನ್ನೂ ಸಿಕ್ಕಿಲ್ಲ. ಈ ಶಾಲೆ ಮಕ್ಕಳಿಗೆ ಬ್ರೈಲ್ ಲಿಪಿ ಕಲಿಸುವುದಲ್ಲದೆ ಸ್ವಾವಲಂಬಿಗಳಾಗಿ ಬದುಕಲು ಹಲವು ಕೌಶಲ್ಯಗಳನ್ನು ಕಲಿಸುತ್ತದೆ ಎನ್ನುತ್ತಾರೆ ಹಿಮಾನಿ. ತಮ್ಮ ಸೋದರಿ ಸಂಬಂಧಿಯ ಮಗನೊಬ್ಬ ಅಂಧನಾಗಿ ಕಷ್ಟಪಡುತ್ತಿದ್ದುದೇ ಪ್ರಧಾನ್ ಈ ಶಾಲೆ ತೆರೆಯಲು ಪ್ರೇರಣೆಯಾಗಿದೆ. ನಾನು ಶಾಲೆಗೆ ಹೋಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ನನಗೆ ಶಿಕ್ಷಕನಾಗುವ ಬಯಕೆ. ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಲು ಬಯಸಿದ್ದೇನೆ ಎನ್ನುತ್ತಾರೆ 6ನೇ ತರಗತಿ ಓದುತ್ತಿರುವ ಅಜಯ್ ಮೆಹರ್. 6 ವರ್ಷ ಪ್ರಾಯದ ಖಗೇಶ್ವರಿ ಯಾದವ್ ಕೂಡ ಶಿಕ್ಷಕರಾಗಿ ತಮ್ಮಂತೆ ಕಷ್ಟಪಡುವ ಮಕ್ಕಳಿಗೆ ನೆರವಾಗಲು ಬಯಸಿದ್ದಾರೆ. ಈ ಶಾಲೆಯ ಮಕ್ಕಳು ವಿವಿಧ ವೇದಿಕೆಗಳಲ್ಲಿ ಸನ್ಮಾನಿತರೂ ಆಗಿದ್ದಾರೆ.
ಕೃಪೆ: www.financialexpress.com





