ಸಿಎಂ ಬೆಂಗಾವಲು ವಾಹನಗಳಿಗಾಗಿ ಆಂಬ್ಯುಲೆನ್ಸ್ ನ್ನು ತಡೆದಿಲ್ಲ: ಐಜಿಪಿ ಸ್ಪಷ್ಟನೆ

ಬೆಂಗಳೂರು, ಜೂ.30: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬೆಂಗಾವಲು ವಾಹನಗಳಿಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸರು ಆಂಬ್ಯುಲೆನ್ಸ್ ನ್ನು ತಡೆದಿಲ್ಲ. ಇದರಿಂದಾಗಿ ಯಾರೂ ಮೃತಪಟ್ಟಿಲ್ಲ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಘಟನೆಯ ಕುರಿತಂತೆ ಸ್ಪಷ್ಟೀಕರಣ ನೀಡಿದ ಅವರು, ಜೂ22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತಾಮಣಿಯಿಂದ ನಗರಕ್ಕೆ ವಾಪಸಾಗುತ್ತಿದ್ದ ವೇಳೆ ಹೊಸಕೋಟೆ ಬಳಿ ಕೆಲಕಾಲ ವಾಹನಗಳ ಸಂಚಾರವನ್ನು ತಡೆಯಲಾಗಿತ್ತು. ಈ ಸಂದರ್ಭ ಅಲ್ಲಿಗೆ ಆಂಬ್ಯುಲೆನ್ಸ್ ಆಗಮಿಸಿದ್ದು, ಆಂಬ್ಯುಲೆನ್ಸ್‌ಗೆ ಪರ್ಯಾಯ ಮಾರ್ಗದ ಮೂಲಕ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಘಟನೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ಆಂಬ್ಯುಲೆನ್ಸ್ ತಡೆದಿದ್ದರಿಂದ ಅದರಲ್ಲಿದ್ದ ಮಹಿಳಾ ರೋಗಿಯೋರ್ವರು ಮೃತಪಟ್ಟಿದ್ದಾರೆ ಎಂಬ ಸಂದೇಶವನ್ನು ಹಾಕಿ ಪೋಸ್ಟ್ ಮಾಡಲಾಗಿತ್ತು. ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಂಬ್ಯುಲೆನ್ಸ್ ಚಲಾಯಿಸುತ್ತಿದ್ದ ಚಾಲಕ ದಾದಾಪೀರ್ ಹಾಗೂ ಸಹಾಯಕ ಲಕ್ಷ್ಮಣ್ ಅವರನ್ನು ವಿಚಾರಣೆ ನಡೆಸಿ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆ ಯಲಾಗಿದೆ. ಆ ದಿನ ಆಂಬ್ಯುಲೆನ್ಸ್‌ನಲ್ಲಿ ಇದ್ದುದು ಕೋಲಾರದಲ್ಲಿ ಅಪಘಾತಕ್ಕೊಳಗಾಗಿದ್ದ ನವೀನ್, ಅವರ ಪತ್ನಿ ಮತ್ತು ಮಾವ. ಆಂಬ್ಯುಲೆನ್ಸನ್ನು ಹೆಚ್ಚು ಕಾಲ ತಡೆದಿಲ್ಲ. ಎರಡು ನಿಮಿಷಗಳಲ್ಲೇ ಅದನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಐಜಿಪಿ ಹೇಳಿದರು.







