ಮೋದಿ ವಿರುದ್ಧ ಅಣ್ಣಾ ಹಝಾರೆ ವಾಗ್ದಾಳಿ
ಸ್ಮಾರ್ಟ್ ಸಿಟಿ ಯೋಜನೆ ಗಾಂಧೀಜಿ ತತ್ವಕ್ಕೆ ವಿರುದ್ಧ

ಅಹ್ಮದ್‌ನಗರ, ಜೂ.30: ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿ ಯೋಜನೆಯ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ, ಈ ಯೋಜನೆ ಗ್ರಾಮ ಕೇಂದ್ರಿತ ಅಭಿವೃದ್ಧಿ ನಡೆಸಬೇಕೆಂಬ ಗಾಂಧೀಜಿಯವರ ತತ್ವಕ್ಕೆ ವಿರುದ್ಧವಾಗಿದೆಯೆಂದು ಹೇಳಿದರಲ್ಲದೆ, ಈ ಯೋಜನೆ ಜಾರಿಯಿಂದ ಪರಿಸರಕ್ಕೆ ಭಾರೀ ಹಾನಿಯುಂಟಾಗಬಹುದೆಂದು ಎಚ್ಚರಿಸಿದ್ದಾರೆ.
ಪುಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಉದ್ಘಾಟಿಸಿದ ನಂತರ ತಮ್ಮ ಭಾಷಣದಲ್ಲಿ ನಗರೀಕರಣವನ್ನು ಸಮಸ್ಯೆಯೆಂದು ತಿಳಿಯದೆ ಒಂದು ಅವಕಾಶವೆಂದು ತಿಳಿಯಬೇಕೆಂದು ಪ್ರಧಾನಿ ಹೇಳಿರುವ ಹಿನ್ನೆಲೆಯಲ್ಲಿ ತಾನು ಪ್ರಧಾನಿಗೆ ಪತ್ರ ಬರೆದಿರುವುದಾಗಿ ರಾಲೆಗಾನ್ ಸಿದ್ಧಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಝಾರೆ ತಿಳಿಸಿದರು.
''ಗಾಂಧಿಯವರಂತೆ ಮೋದಿ ಕೂಡ ಗುಜರಾತ್‌ನಲ್ಲಿ ಹುಟ್ಟಿದವರು. ಮೋದಿ ಹೇಳಿದ್ದು ಸರಿಯೇ ಅಥವಾ ಮಹಾತ್ಮ ಗಾಂಧಿ ಹೇಳುತ್ತಿದ್ದುದು ಸರಿಯೇ ಎಂಬುದು ಈಗಿನ ಪ್ರಶ್ನೆಯಾಗಿದೆ'' ಎಂದು ಹಝಾರೆ ಹೇಳಿದರು. ''ಪರಿಸರವನ್ನು ಶೋಷಿಸಿ ನಡೆಸಲಾಗುವ ನಗರೀಕರಣ ಹೆಚ್ಚು ಕಾಲ ಬಾಳದು ಎಂಬುದು ಗಾಂಧೀಜಿ ಅಭಿಪ್ರಾಯವಾಗಿದೆ. ನಗರೀಕರಣದಿಂದಾಗಿ ಪರಿಸರ ಮಾಲಿನ್ಯ, ಅನಾರೋಗ್ಯ, ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು, ತಾಪಮಾನ ಏರಿಕೆಯುಂಟಾಗಿ ಮಾನವ ಕುಲಕ್ಕೆ ಅಪಾಯಕಾರಿಯಾಗಿದೆ.''ಎಂದೂ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಇನ್ನೂ ಲೋಕಪಾಲ್ ನೇಮಕಾತಿ ನಡೆದಿಲ್ಲ ಎಂದು ಹಝಾರೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







