ಕೇರಳ: ಕೋರ್ಟ್ ಮುಚ್ಚಿಸಿದ್ದ ನಾಲ್ಕು ಶಾಲೆಗಳನ್ನು ತೆರೆಯಲು ಮುಂದಾದ ಸರಕಾರ

ತಿರುವನಂತಪುರಂ,ಜೂನ್ 30: ಕೋರ್ಟು ಆದೇಶ ಪ್ರಕಾರ ಮುಚ್ಚಲಾಗಿದ್ದ ನಾಲ್ಕು ಶಾಲೆಗಳನ್ನು ಕೇರಳ ಸರಕಾರ ವಹಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಕೋಝಿಕ್ಕೋಡ್ ಜಿಲ್ಲೆಯ ಮಲಾಪ್ಪರಂಬ್ ಎಯುಪಿಎಸ್ ಸ್ಕೂಲ್. ಪಾಲಾಟ್ಟ್, ಎಯುಪಿಎಸ್ ಸ್ಕೂಲ್. ತೃಶೂರ್ ಕಿರಾಲೂರ್ ಪಿಎಂಎಲ್‌ಪಿಎಸ್ ಸ್ಕೂಲ್, ಮಲಪ್ಪುರಂ ಮಙಾಟ್ಟುಮುರಿ ಎಎಂಎಲ್‌ಪಿಎಸ್ ಸ್ಕೂಲ್‌ಗಳಿಗೆ ತಗಲಿರುವ ಶನಿ ಸರಕಾರದ ಮೂಲಕ ಬಿಡುಗಡೆಯಾಗಲಿದೆ. ಇದನ್ನು ಪಡೆಯಲಿಕ್ಕಾಗಿ ಎಷ್ಟು ಪರಿಹಾರ ನೀಡುವ ಬಗ್ಗೆ ಗೊತ್ತುವಳಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಈ ಶಾಲೆಗಳನ್ನು ಮುಚ್ಚದಂತೆ ಸಾರ್ವಜನಿಕರು ಭಾರೀ ಹೋರಾಟ ನಡೆಸಿದ್ದನ್ನು ಇಲ್ಲಿಸ್ಮರಿಸಿಕೊಳ್ಳಬಹುದು. ಮುಚ್ಚಲಾದ ಶಾಲೆಗಳನ್ನು ಸರಕಾರ ವಹಿಸಿಕೊಳ್ಳಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಇವುಗಳನ್ನು ವಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸರಕಾರ ಅವುಗಳನ್ನು ಪಡೆಯಲಿಕ್ಕಾಗಿ ಸುಮಾರು 20ಕೋಟಿರೂಗಳಷ್ಟು ದುಬಾರಿ ಮೊತ್ತವನ್ನು ವಿನಿಯೋಗಿಸಬೇಕಿದೆ. ಈಗಿನ ಕಾನೂನು ಪ್ರಕಾರ ಒಂದು ವರ್ಷ ಮೊದಲು ನೋಟಿಸ್ ನೀಡಿ ಶಾಲೆಯನ್ನು ಮುಚ್ಚುವ ಹಕ್ಕು ಮ್ಯಾನೇಜರ್‌ಗೆ ಇದೆ. ಈ ಕಾನೂನಿಗೆ ತಿದ್ದುಪಡಿ ತರುವುದು ಸುಲಭವಲ್ಲದ್ದರಿಂದ ವಿಧಾನಸಭೆಯ ಅನುಮತಿಯೊಂದಿಗೆ ನಷ್ಟಪರಿಹಾರ ನಿಶ್ಚಯಿಸಬೇಕಾಗಿದೆ. ಮಲಾಪ್ಪರಂಬ್ ಶಾಲೆಯೊಂದನ್ನು ಪಡೆಯಲಿಕ್ಕಾಗಿ ಸರಕಾರ ಆರುಕೋಟಿರೂ. ಮ್ಯಾನೇಜ್‌ಮೆಂಟ್‌ಗೆ ನಷ್ಟಪರಿಹಾರ ನೀಡಬೇಕಾಗಬಹುದು ಎಂದು ಈಗಾಗಲೇ ಸಾರ್ವಜನಿಕ ವಿದ್ಯಾಭ್ಯಾಸ ಇಲಾಖೆಯ ಕಾರ್ಯದರ್ಶಿ ಸಚಿವ ಸಂಪುಟಕ್ಕೆ ತಿಳಿಸಿದ್ದಾರೆ.





