ಈತ ವಿಶ್ವದ ಅತ್ಯಂತ ದಪ್ಪದ ಹುಡುಗ !

ಜಾವಾ, ಜೂ.30: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ಸಿಪುರ್ ವಾಸರಿ ಎಂಬ ಹಳ್ಳಿಯೊಂದರ ಹತ್ತು ವರ್ಷದ ಬಾಲಕ ವಿಶ್ವದ ಅತ್ಯಂತ ದಪ್ಪದ ಹುಡುಗನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಆತನ ದೇಹತೂಕವೆಷ್ಟು ಗೊತ್ತೇ ? ಬರೋಬ್ಬರಿ 192 ಕೆಜಿ.
ಆರ್ಯ ಪೆರ್ಮನ ಎಂಬ ಹೆಸರಿನ ಈ ಬಾಲಕನ ದೇಹದಲ್ಲಿನ ಬೊಜ್ಜು ಆತನ ಜೀವಕ್ಕೇ ಗಂಡಾಂತರ ತರಬಹುದೆಂದು ವೈದ್ಯರು ತಿಳಿಸಿದ ನಂತರ ಆತನ ಹೆತ್ತವರು ಆತನನ್ನು ಬ್ರೌನ್ ರೈಸ್ ಡಯಟಿಂಗ್‌ಗೆ ಒಳಪಡಿಸಿದ್ದಾರೆ.
ಆತನ ಅತಿಯಾದ ದೇಹತೂಕದಿಂದ ಆರ್ಯ ಕೇವಲ ಕೆಲವೇ ಹೆಜ್ಜೆಯಿಡುವಷ್ಟರಲ್ಲಿ ಉಸಿರಾಟದ ತೊಂದರೆಯನ್ನನುಭವಿಸುತ್ತಾನೆ. ಇದೇ ಸಮಸ್ಯೆಯಿಂದ ಆತ ಶಾಲೆಗೆ ಹೋಗುವುದನ್ನು ಕೂಡ ನಿಲ್ಲಿಸಿದ್ದಾನೆ. ಆತನ ಹೆತ್ತವರು ಆತನ ದೇಹಕ್ಕೆ ತಕ್ಕಂತಹ ಬಟ್ಟೆ ಕೊಡಿಸಲು ಅಸಮರ್ಥರಾಗಿರುವುದರಿಂದ ಆತನಿಗೆ ಕೇವಲ ಒಂದು ಪಂಚೆ ಮಾತ್ರ ತೊಡಿಸಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಆತ ದಿನಕ್ಕೆ ಐದು ಬಾರಿ ಅನ್ನ, ಮೀನು, ಬೀಫ್, ತರಕಾರಿ ಸೂಪ್ ಹಾಗೂ ಸೋಯ್ ಪ್ಯಾಟ್ಟಿ ಇರುವ ಊಟವನ್ನು ಸೇವಿಸುತ್ತಾನೆ. ಆರ್ಯ ಹುಟ್ಟುವಾಗ ಆತ ಸಾಮಾನ್ಯ ನವಜಾತ ಶಿಶುವಿನಂತೆ ಕೇವಲ 3.2 ಕೆಜಿ ದೇಹ ತೂಕ ಹೊಂದಿದ್ದ. ಆದರೆ ಎರಡು ವರ್ಷದವನಾದಾಗ ಆತನ ದೇಹತೂಕ ಬೆಳೆಯುತ್ತಾ ಹೋಗಿತ್ತು. ಆತನ ಹೆತ್ತವರು ಆತನನ್ನು ಹಲವಾರು ವೈದ್ಯರ ಬಳಿ ಕೊಂಡೊಯ್ದರೂ ಆತನ ದೇಹ ತೂಕದ ಹಿಂದಿರುವ ಆರೋಗ್ಯ ಸಮಸ್ಯೆ ಏನೆಂಬುದನ್ನು ಯಾರಿಗೂ ಪತ್ತೆ ಹಚ್ಚಲಾಗಿಲ್ಲ.
ರಮಝಾನ್ ತಿಂಗಳಲ್ಲಿ ಇತರರಂತೆ ಆರ್ಯ ಕೂಡ ಉಪವಾಸ ಆಚರಿಸಿದ್ದರೂ, ಸೂರ್ಯಾಸ್ತದ ತನಕ ಉಪವಾಸ ಇರಲು ಯತ್ನಿಸಿದಾಗ ಹೊಟ್ಟೆ ನೋವು ಕಾಣಿಸಿಕೊಂಡು ಆತ ಉಪವಾಸ ಕೈಬಿಟ್ಟಿದ್ದ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.







