ಪುತ್ತೂರು: ಕೊಳ್ತಿಗೆ ಸೌಹಾರ್ದ ಸಮಿತಿಯಿಂದ ಇಫ್ತಾರ್ ಕೂಟ

ಪುತ್ತೂರು, ಜೂ.30: ಕೊಳ್ತಿಗೆ ಸೌಹಾರ್ದ ಸಮಿತಿಯ ವತಿಯಿಂದ ಮಂಗಳವಾರ ಪೆರ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ದ್ವಿತೀಯ ವರ್ಷದ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ಸರ್ವ ಧರ್ಮೀಯರ ಒಗ್ಗೂಡುವಿಕೆಯಿಂದ ನಡೆದ ಈ ಇಫ್ತಾರ್ ಕೂಟದ ಅಧ್ಯಕ್ಷತೆಯನ್ನು ಕೊಳ್ತಿಗೆ ಸೌಹಾರ್ದ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ವಹಿಸಿದ್ದರು.
ಅತಿಥಿಗಳಾಗಿ ಕುಂಬ್ರ ಕೆಐಸಿ ಸಂಚಾಲಕ ಕೆ.ಆರ್. ಹುಸೈನ್ ದಾರಿಮಿ, ಮರೀಲು ಚರ್ಚ್‌ನ ಧರ್ಮಗುರು ಫ್ರಾನ್ಸಿಸ್ ಅಸ್ಸಿಸ್ಸಿ ಅಲ್ಮೇಡಾ, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀಝ್ ಬುಶ್ರಾ, ತಾಪಂ ಸದಸ್ಯ ರಾಮ ಪಾಂಬಾರು ಮತ್ತಿತರರು ಉಪಸ್ಥಿತರಿದ್ದರು.
ಸೌಹಾರ್ದ ಸಮಿತಿಯ ಕಾರ್ಯಾಧ್ಯಕ್ಷ ಅಮಲ ರಾಮಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸತ್ತಾರ್ ಅಮಲ ಸ್ವಾಗತಿಸಿದರು. ಸದಸ್ಯ ಶಾಹುಲ್ ಹಮೀದ್ ವಂದಿಸಿದರು.
ಇಫ್ತಾರ್ ಕೂಟದಲ್ಲಿ 250ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಒಂದೇ ವೇದಿಕೆಯಲ್ಲಿ ಸೇರಿಕೊಂಡು ಒಟ್ಟಿಗೆ ಇಫ್ತಾರ್ ಆಹಾರ ಸೇವಿಸಿದ್ದು ಮಾದರಿಯಾಗಿತ್ತು.







