ಯುವಜನತೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಇರಬೇಕು: ಡಾ. ನಾಗಪ್ಪ ಗೌಡ

ಬೆಳ್ತಂಗಡಿ, ಜೂ.30: ಯುವ ಮನಸ್ಸುಗಳು ಬದಲಾಗಬೇಕು, ಹಾಗೂ ಸಕಾರಾತ್ಮವಾಗಿ ಯೋಚಿಸಬೇಕು. ಕಲಾ ವಿಷಯ ಬದುಕಿಗೆ ಬಹಳ ಹತ್ತಿರವಾದದ್ದು, ಬದುಕು ಅರ್ಥಪೂರ್ಣವಾಗಬೇಕಾದರೆ ಕಲಾ ವಿಷಯದಲ್ಲಿ ಆಸಕ್ತಿ ಇರಬೇಕು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಪ್ಪ ಗೌಡ ಹೇಳಿದ್ದಾರೆ.
ಇತ್ತೀಚೆಗೆ ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ನಡೆದ ಕನ್ನಡ ಸಂಘದ ಚಟುವಟಿಕೆಗಳ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡುತ್ತಿದ್ದರು.
ಕನ್ನಡದಿಂದ ನಾವೇನು ಮಾಡಬಹುದು ಅನ್ನುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಆದರೆ ಸ್ಪರ್ಧಾತ್ಮಕ ಮನೋಭಾವ ಇದ್ದಾಗ ಕನ್ನಡದಲ್ಲಿ ಸಾಕಷ್ಟು ಪ್ರಯೋಗಶೀಲರಾಗಲು ಹೊಸದನ್ನು ಕಲಿಯಲು ಸಾಧ್ಯ. ಚಿಂತನೆ ಮಾಡುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ಆಸಕ್ತಿ, ಹೆಚ್ಚಾಗಬೇಕು. ಈಗಿನ ಜಗತ್ತು ಹಣದ ಹಿಂದೆ ಓಡುತ್ತಿದೆ. ಈಗಿನ ಕಾಲ್ಪನಿಕ ಜಗತ್ತಿನ ಹಿಂದೆ ವಿದ್ಯಾರ್ಥಿಗಳು ಓಡುವಾಗ ಎಚ್ಚರವಹಿಸಬೇಕು ಎಂದರು.
ಈಗ ಮಾನವೀಯ ಸಂಬಂಧಗಳು ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ತುಂಬಾ ಇದೆ. ದುರದೃಷ್ಟವಶಾತ್ ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಒಳ್ಳೆಯ ಸಮಾಜ ಕಟ್ಟಬೇಕಾದರೆ ಮುಖ್ಯವಾದ ಪಾತ್ರ ಶಿಕ್ಷಣದ್ದು. ಸಾಹಿತ್ಯ ಓದುವುದರಿಂದ ಸಂಸ್ಕಾರ, ಮಾನವೀಯತೆ ಹಾಗೂ ಜಗತ್ತಿನಲ್ಲಿ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು. ತ್ಯಾಗ, ಭೋಗ, ಅಕ್ಷರ, ಸಂಗೀತ, ಗೋಷ್ಠಿ, ಇವುಗಳೆಲ್ಲಾ ಸಾಹಿತ್ಯ ಕೃತಿಗಳ ಅಧ್ಯಯನದಿಂದ ಮಾತ್ರ ತಿಳಿಯುವುದು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ನೂತನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಸದಸ್ಯರುಗಳು ಹಾಗೂ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಸಂಪತ್ ಕುಮಾರ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಧ್ಯಾಪಕ ರಾಜಶೇಖರ್ ನಿರೂಪಿಸಿದರು. ವಿದ್ಯಾರ್ಥಿನಿ ವಿನುತಾ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥರು ಸ್ವಾಗತಿಸಿದರು. ಕಾರ್ಯದರ್ಶಿ ಧನ್ಯಾ ವಂದಿಸಿದರು.







